ರೋಣ: ಕಳೆದ 6 ತಿಂಗಳ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ನರೇಗಾ ಹೊರಗುತ್ತಿಗೆ ನೌಕರರು ಹಮ್ಮಿಕೊಂಡಿರುವ ಅಸಹಕಾರ ಚಳವಳಿ ನಾಲ್ಕನೇ ದಿನವೂ ಮುಂದುವರಿದಿದ್ದು, ಸ್ಥಳಕ್ಕೆ ರೋಣ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ವೇತನವಿಲ್ಲದ ಜೀವನ ನಡೆಸುವುದು ಕಷ್ಟಕರ. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸುವ ನೀವು ಈ ರೀತಿ ವೇತನಕ್ಕಾಗಿ ಮುಷ್ಕರ ಹಮ್ಮಿಕೊಳ್ಳುವಂತೆ ಆಗಬಾರದಿತ್ತು. ಇದು ರಾಜ್ಯಮಟ್ಟದ ತಾಂತ್ರಿಕ ಸಮಸ್ಯೆ. ಆಯುಕ್ತಾಲಯದಿಂದ ವೇತನ ಪಾವತಿಗೆ ಕ್ರಮ ವಹಿಸಲಾಗುತ್ತಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದು, ಶೀಘ್ರ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ’ ಎಂದರು.
ತಾಲ್ಲೂಕು ಪಂಚಾಯಿತಿಯ ನರೇಗಾ ಆಡಳಿತ ಸಹಾಯಕ ಅರುಣ ಸಿಂಗ್ರಿ ಪ್ರಾಸ್ತಾವಿಕ ಮಾತನಾಡಿ, ‘ನಮ್ಮ ಬೇಡಿಕೆಯನ್ನು ಆಯುಕ್ತಾಲಯದ ಗಮನಕ್ಕೆ ತರಬೇಕು’ ಎಂದು ಹೇಳಿದರು.
ರೋಣ ತಾಲ್ಲೂಕು ಪ್ರತಿನಿಧಿ ಶಾಂತಾ ತಿಮ್ಮರಡ್ಡಿ, ಬಿ.ಎಫ್.ಟಿ. ಸಂಘದ ಗೌರವ ಅಧ್ಯಕ್ಷ ಅಶೋಕ ಕಂಬಳಿ, ಗ್ರಾಮ ಕಾಯಕ ಮಿತ್ರ ಪವಿತ್ರಾ ನಾಡಗೌಡ್ರ ಮಾತನಾಡಿದರು.
ತಾಲ್ಲೂಕಿನ ನರೇಗಾ ಸಿಬ್ಬಂದಿ ಅರುಣಕುಮಾರ ತಂಬ್ರಳ್ಳಿ, ವಸಂತ ಅನ್ವರಿ, ಪರಶುರಾಮ ಜಕ್ಕಣ್ಣವರ, ಮಲ್ಲಪ್ಪ ಕಟ್ಟಿಮನಿ, ಉಮೇಶ ಜಕ್ಕಲಿ, ರೇಷ್ಮಾ ಕೆಲೂರ, ಗುರು ಹಿರೇಮಠ, ಮಂಜುಳಾ ಪಾಟೀಲ, ಯಲ್ಲಪ್ಪ ಗೊರವರ, ಪ್ರಕಾಶ ಅಂಬಕ್ಕಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.