
ಶಿರಹಟ್ಟಿ: ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ಹಾಗೂ ಸಾಮಾನ್ಯ ಸಭೆಯಲ್ಲಿ ಇಲಾಖಾವಾರು ಚರ್ಚೆ ನಡೆಯುವಾಗ ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ ಪೂರ್ಣ ಮಾಹಿತಿ ಇರುವುದಿಲ್ಲ. ಅವರ ಇಲಾಖೆ ಮಾಹಿತಿಯೇ ಅವರಿಗೆ ಇರುವುದಿಲ್ಲ. ಕಾರಣವಿಲ್ಲದೆ ಗೈರು ಉಳಿಯುತ್ತಿರುವುದು ವಿಪರ‍್ಯಾಸದ ಸಂಗತಿ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಅಧಿಕಾರಿಗಳ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ತಾಲ್ಲೂಕು ಪಂಚಾಯಿತಿಯ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸಭೆಯಲ್ಲಿ ಗಂಭೀರ ವಿಷಯ ಚರ್ಚಿಸುವಾಗ ಅಧಿಕಾರಿಗಳು ಮೊಬೈಲ್ ನೋಡುವುದು, ಮಾತನಾಡುವುದು ಮಾಡುತ್ತಿರುತ್ತಾರೆ’ ಎಂದು ಟೀಕಿಸಿದರು.
‘ಸಭೆಗಳಲ್ಲಿ ಕ್ರಿಯಾ ಯೋಜನೆ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳೇ ಮಂಡನೆ ಮಾಡಬೇಕು. ಸ್ಪಷ್ಟತೆ, ನಿಖರತೆ ಅಧಿಕಾರಿಗಳಲ್ಲಿ ಇರಬೇಕು. ಸೇವಾ ಅವಧಿಯಲ್ಲಿ ಆಪಾದನೆ ಸಹಜ, ಎದುರಿಸಿ ಕೆಲಸ ಮಾಡಬೇಕು. ಇಲ್ಲವಾದರೆ ಸಾಮಾನ್ಯ ಸಭೆಯಲ್ಲಿ ತಾವು ನೀಡಿದ ಕ್ರಿಯಾಯೋಜನೆಗೆ ಅನುಮೋದನೆ ಸಿಗುವುದಿಲ್ಲ. ಒಂದು ವೇಳೆ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋದರೆ ಅದಕ್ಕೆ ಅಧಿಕಾರಿಗಳೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದರು.
ರಂಗಮಂದಿರಕ್ಕೆ ಪ್ರಸ್ತಾವನೆ: ಶಿಕ್ಷಣ ಇಲಾಖೆಯಿಂದ ತಯಾರಿಸಿದ ಕ್ರಿಯಾಯೋಜನೆಯಲ್ಲಿ ತಾಲ್ಲೂಕಿನ ಕಲ್ಲಾಗನೂರಿನ ಶಾಲೆಯೊಂದಕ್ಕೆ ರಂಗಮಂದಿರ ನಿರ್ಮಾಣಕ್ಕೆ ಅನುದಾನದ ಪ್ರಸ್ತಾವನೆಗೆ ಸಲ್ಲಿಸಲಾಗಿದೆ ಎಂದು ಎ.ಎ. ಕಂಬಾಳಿಮಠ ಹೇಳಿದರು.
ಇಲಾಖಾವಾರು ಚರ್ಚೆ ನಡೆಸಿದ ಅವರು, ನಿರ್ಮಿತಿ ಕೇಂದ್ರಕ್ಕೆ ವಿವಿಧ ಕಾಮಗಾರಿ ಕೈಗೊಳ್ಳಲು ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ₹ 1 ಕೋಟಿ ನೀಡಲಾಗಿದೆ. ಆದರೆ, ಇದುವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಕ್ರಿಯಾಯೋಜನೆಯಲ್ಲಿ ನೀಡಿದ ಮಾಹಿತಿ ಏನಾಗಿದೆ ಎಂಬುದನ್ನು ಕೇಳಲು ಅಧಿಕಾರಿಗಳು ಸಭೆಗೆ ಬಂದಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಿದರೂ ಸಭೆಗೆ ಬರುವುದಿಲ್ಲ ಎಂದರೆ ಏನರ್ಥ? ಈ ರೀತಿಯ ನಡುವಳಿಕೆ ಸರಿಕಾಣುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ಬಿಇಒ ಎಚ್. ನಾಣಕಿ ನಾಯಕ ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.