ADVERTISEMENT

ಈರುಳ್ಳಿ ತೋಟದಲ್ಲಿ ದುಂಬಿಗಳ ಝೇಂಕಾರ

ಪ್ರತಿ ಎಕರೆಗೆ ₹30ರಿಂದ ₹35 ಸಾವಿರ ಉತ್ಪಾದನಾ ವೆಚ್ಚ

ಬಸವರಾಜ ಪಟ್ಟಣಶೆಟ್ಟಿ
Published 28 ಏಪ್ರಿಲ್ 2021, 5:26 IST
Last Updated 28 ಏಪ್ರಿಲ್ 2021, 5:26 IST
ಶಿವನಗೌಡ ಮೆಣಸಗಿ ಜಮೀನಿನಲ್ಲಿ ಈರುಳ್ಳಿ ಬೆಳೆಯ ಹೂ ಲೋಕ
ಶಿವನಗೌಡ ಮೆಣಸಗಿ ಜಮೀನಿನಲ್ಲಿ ಈರುಳ್ಳಿ ಬೆಳೆಯ ಹೂ ಲೋಕ   

ರೋಣ: ಬಿಸಿಲು ನಾಡಾದ ರೋಣ ತಾಲ್ಲೂಕಿನ ವಿವಿಧೆಡೆ ಬೀಜೋತ್ಪಾದನೆಗಾಗಿ ಬೆಳೆದ ಈರುಳ್ಳಿ ಬೆಳೆಯಲ್ಲಿ ಈಗ ಹೂಗಳು ಅರಳಿದ್ದು, ಅವುಗಳ ನೈಸರ್ಗಿಕ ಸೊಬಗು ಮನಸ್ಸಿಗೆ ಆಹ್ಲಾದ ನೀಡುತ್ತಿವೆ. ಗುಡ್ಡ, ಬೆಟ್ಟಗಳ ತಪ್ಪಲಿನಲ್ಲಿ ಅರಳಿದ ಹೂ ತೋಟವನ್ನು ಹೊಕ್ಕಾಗ ಗಿರಿ ಶಿಖರಗಳ ತಾಣಕ್ಕೆ ಬಂದ ಅನುಭವ ವಾಗುತ್ತದೆ ಎಂಬುದು ಅನೇಕರ ಮಾತು.

ರೋಣ ತಾಲ್ಲೂಕಿನ ಬಿ.ಎಸ್.ಬೆಲೇರಿ, ಅಮರಗೋಳ, ಹೊಳೆ ಆಲೂರ, ಹುಲ್ಲೂರ, ಅಸೋಟಿ, ಗಾಡಗೋಳಿ, ಹೊಳೆಮಣ್ಣೂರ, ಮೆಣಸಗಿ, ಕರಕಿಕಟ್ಟಿ, ಬೋಪಳಾಪೂರ, ಮುದೇನಗುಡಿ, ನೈನಾಪೂರ, ಮಾಡಲಗೇರಿ ಗ್ರಾಮದಲ್ಲಿ ಹಿಂಗಾರಿನಲ್ಲಿ ‘ಬಳ್ಳಾರಿ ರೆಡ್’ ಹಾಗೂ ‘ತೆಲಗಿ’ ಎಂದೇ ಪರಿಚಿತವಾದ ಈರುಳ್ಳಿ ಕೃಷಿ ಜತೆಗೆ ಅಲ್ಲಲ್ಲಿ ನಡೆದಿರುವ ಈರುಳ್ಳಿ ಬೀಜೋತ್ಪಾದನೆ ಕಾರ್ಯ ಹೊಸ ಲೋಕವನ್ನೇ ಸೃಷ್ಟಿಸಿದೆ.

ಈರುಳ್ಳಿ ಬೆಳೆಯಲ್ಲಿ ಹೂ ಬಿಟ್ಟಿದೆ ಎಂದರೆ ಅದನ್ನು ಬೀಜೋತ್ಪಾದನೆಗಾಗಿ ಬೆಳೆಸಲಾಗಿದೆ ಎಂದೇ ಅರ್ಥ. ಅದಕ್ಕಾಗಿ ಉತ್ತಮ ತಳಿಯ ಒಣಗಿದ ಮತ್ತು ಹಳೆಯ ಈರುಳ್ಳಿ ಗಡ್ಡೆಯನ್ನು ರೈತರು ನಾಟಿ ಮಾಡುತ್ತಾರೆ. ಅದಾದ 4 ತಿಂಗಳು 10 ದಿನಕ್ಕೆ ಬೆಳೆ ಕಟಾವಿಗೆ ಬರುತ್ತದೆ.

ADVERTISEMENT

ಈರುಳ್ಳಿ ಬೆಳೆಯುವ ಇಲ್ಲಿನ ಬಹುತೇಕ ರೈತರು ಈರುಳ್ಳಿ ಕೃಷಿ ಜತೆಗೆ ಜಮೀನಿನ ಸ್ವಲ್ಪ ಭಾಗದಲ್ಲಿ ಮುಂದಿನ ಹಂಗಾಮಿಗೆ ಉಪಯೋಗಿಸಲು ಅನುಕೂಲವಾಗುವಂತೆ ಈರುಳ್ಳಿ ಬೀಜೋ ತ್ಪಾದನೆ ಮಾಡುವುದು ಸಾಮಾನ್ಯ. ಕೆಲವರು ಮಾರಾಟಕ್ಕೆಂದೇ ವಿಶೇಷವಾಗಿ ಈರುಳ್ಳಿ ಬೀಜೋತ್ಪಾದನೆ ಮಾಡುತ್ತಾರೆ.

ಈರುಳ್ಳಿ ಬೀಜೋತ್ಪಾದನೆಗೆ ಪ್ರತಿ ಎಕರೆಗೆ ₹30ರಿಂದ ₹35 ಸಾವಿರ ವೆಚ್ಚವಾಗುತ್ತದೆ. 2ರಿಂದ 3 ಕ್ವಿಂಟಲ್ ಗರಿಷ್ಠ ಇಳುವರಿ ದೊರಕುತ್ತದೆ. ಪ್ರತಿ ಕೆ.ಜಿ. ಈರುಳ್ಳಿ ಬೀಜ ಕನಿಷ್ಠ ₹700ಕ್ಕೆ ಮಾರಾಟವಾಗುತ್ತದೆ. ಪ್ರತಿವರ್ಷ ಬೀಜೋತ್ಪಾದನೆ ಮಾಡಿದ ರೈತರು ತಮಗೆ ಬೇಕಾದಷ್ಟು ಬಿತ್ತನೆಗೆ ಬಳಸಿಕೊಂಡು ಉಳಿದ ಬೀಜಗಳನ್ನು ಸ್ಥಳಿಯ ಹಾಗೂ ಪಕ್ಕದ ಜಿಲ್ಲೆಗಳ ರೈತರಿಗೆ ಮಾರಾಟ ಮಾಡುತ್ತಾರೆ.

ಹೂ ಬಿಡುವ ಹಂತದಲ್ಲಿ ಮೋಡ ಕಟ್ಟಿದರೆ, ಮಳೆಯಾದರೆ ಬೆಳೆಗೆ ತೊಂದರೆಯಾಗುತ್ತದೆ. ಹೂ ಬಿಟ್ಟ ಬಳಿಕ ಬಿಸಿಲು, ಅಗತ್ಯಕ್ಕೆ ತಕ್ಕಷ್ಟು ನೀರಿದ್ದರೆ ಉತ್ತಮ ಇಳುವರಿ ದೊರಕುತ್ತದೆ. ತಾಲ್ಲೂಕಿನ ವಿವಿಧೆಡೆ ಬೇಸಿಗೆಯಲ್ಲಿ ಭಣಗುಡುವ ಜಮೀನುಗಳ ನಡುವೆ ಮಲಪ್ರಭೆ ದಡದ ಹಾಗೂ ನೀರಾವರಿ ಸೌಕರ್ಯವುಳ್ಳ ಜಮೀನುಗಳಲ್ಲಿ ಅರಳಿದ ಈರುಳ್ಳಿ ಬೆಳೆ ಹೂ ಇನ್ನೂ ಕೆಲ ದಿನ ಗಮನ ಸೆಳೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.