ADVERTISEMENT

ಗದಗ: ಈರುಳ್ಳಿ ಬೆಲೆ ಕುಸಿತ; ಭುಗಿಲೆದ್ದ ರೈತರ ಆಕ್ರೋಶ

ರಸ್ತೆಗೆ ಸುರಿದು ಪ್ರತಿಭಟನೆ; ರಫ್ತು ನಿಷೇಧ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 12:37 IST
Last Updated 10 ಅಕ್ಟೋಬರ್ 2019, 12:37 IST
ನರೇಗಲ್ ಸಮೀಪದ ಕೋಟುಮಚಗಿಯಲ್ಲಿ ಗುರುವಾರ ರೈತರು ಈರುಳ್ಳಿ ಬೆಲೆ ಕುಸಿತ ಖಂಡಿಸಿ ಗದಗ–ರೋಣ ರಸ್ತೆ ತಡೆ ನಡೆಸಿದರು
ನರೇಗಲ್ ಸಮೀಪದ ಕೋಟುಮಚಗಿಯಲ್ಲಿ ಗುರುವಾರ ರೈತರು ಈರುಳ್ಳಿ ಬೆಲೆ ಕುಸಿತ ಖಂಡಿಸಿ ಗದಗ–ರೋಣ ರಸ್ತೆ ತಡೆ ನಡೆಸಿದರು   

ನರೇಗಲ್: ಕೇಂದ್ರ ಸರ್ಕಾರದ ರಫ್ತು ನಿಷೇಧ ಕ್ರಮದಿಂದ ಈರುಳ್ಳಿ ಬೆಲೆ ಕುಸಿದಿರುವುದನ್ನು ಖಂಡಿಸಿ ರೈತರು ಗುರುವಾರ ಕೋಟುಮಚಗಿ ಸಮೀಪ ಗದಗ–ರೋಣ ಹೆದ್ದಾರಿಯಲ್ಲಿ ಈರುಳ್ಳಿ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆಯಿಂದ 1 ಗಂಟೆ ರಸ್ತೆ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು. ‘ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಗಣನೀಯವಾಗಿ ಇಳಿಕೆ ಕಂಡಿದೆ. ರೈತರಿಗೆ ಬೆಳೆಗೆ ಹಾಕಿದ ಬಂಡವಾಳವೂ ಕೈಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಫ್ತು ನಿಷೇಧ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ರೈತ ಹಾಗೂ ಕೂಲಿಕಾರ್ಮಿಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಾರದ ಹಿಂದಿನವರೆಗೆ ಕ್ವಿಂಟಲ್‌ಗೆ ₹5 ಸಾವಿರ ಇದ್ದ ಈರುಳ್ಳಿ ಧಾರಣೆ ಈಗ ₹1 ಸಾವಿರಕ್ಕೆ ಕುಸಿದಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ’ ಎಂದು ದೂರಿದರು. ಕೇಂದ್ರ ಸರ್ಕಾರ ವ್ಯಾಪಾರಿಗಳು, ದಲ್ಲಾಳಿಗ ಪರವಾಗಿ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

‘ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶದಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ ₹130 ಇದೆ. ಅಲ್ಲಿ ನಮ್ಮ ಈರುಳ್ಳಿಗೆ ಬೇಡಿಕೆ ಇದ್ದರೂ, ಕೇಂದ್ರ ರಫ್ತು ಮಾಡುತ್ತಿಲ್ಲ. ವ್ಯಾಪಾರಿಗಳಿಂದ ಹಗಲು ದರೋಡೆ ನಡೆಯುತ್ತಿದೆ. ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ರೈತರಿಗೆ ಮೋಸ ಮಾಡುತ್ತಿದೆ’ ಎಂದು ಗದಗ ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಆರೋಪಿಸಿದರು.

‘ಈರುಳ್ಳಿಗೆ ನ್ಯಾಯಯುತ ಬೆಲೆ ಲಭಿಸುವಂತೆ ಮಾಡಲು ಸಂಬಂಧಪಟ್ಟ ಜನಪ್ರತಿನಿಧಿಗಳು 10 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿದೆ. ಜತೆಗೆ ದರವೂ ಕುಸಿದಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದುರೈತ ಮುಖಂಡ ಮಲ್ಲಿಕಾರ್ಜುನ ಅಣ್ಣಗೇರಿ ಹೇಳಿದರು.

ರಸ್ತೆ ತಡೆ ಹಾಗೂ ಪ್ರತಿಭಟನೆಯ ನಂತರ ರೈತರು ಗದಗ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಪ್ರಕಾಶ ಮುಧೋಳ, ಪ್ರಕಾಶ ಕುಲಕರ್ಣಿ, ಶರಣಪ್ಪ ಮ್ಯಾಗೇರಿ, ರವಿ ಸೋಮನಗೌಡ್ರ, ಶೇಖಪ್ಪ ಹೊಸಮನಿ, ಯಲ್ಲಪ್ಪ ಗುರಿಕಾರ, ಮಹಿಬುಸಾಬ ಬೂದಿಹಾಳ, ಸಕ್ರಪ್ಪ ತಳವಾರ, ಸಂಗಪ್ಪ ಕರಡಿ, ಈರನಗೌಡ ಬಾಚಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.