ADVERTISEMENT

ದರ ಕುಸಿತ | ಈರುಳ್ಳಿಗೆ ಬೆಂಬಲ ಬೆಲೆ ನಿಗದಿಪಡಿಸಿ: ರೈತರ ಆಗ್ರಹ

ಕ್ವಿಂಟಲ್‌ಗೆ ₹600; ಹಾಕಿದ ಖರ್ಚು ಕೂಡ ಹುಟ್ಟುವುದಿಲ್ಲ– ಅಳಲು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:51 IST
Last Updated 7 ಅಕ್ಟೋಬರ್ 2025, 2:51 IST
<div class="paragraphs"><p>ಈರುಳ್ಳಿ</p></div>

ಈರುಳ್ಳಿ

   

ಗದಗ: ‘ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿದ್ದು ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ರೈತರ ಹಿತ ಕಾಯಬೇಕು. ಈರುಳ್ಳಿಗೆ ಬೆಂಬಲ ಬೆಲೆ ನಿಗದಿಪಡಿಸಿ, ಶೀಘ್ರ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಗದಗ ಜಿಲ್ಲಾ ರೈತಪರ ಹೋರಾಟ ವೇದಿಕೆ ಮುಖಂಡ ವೆಂಕಟೇಶ ಕುಲಕರ್ಣಿ ಆಗ್ರಹಿಸಿದರು.

‘ರೈತರು ಈರುಳ್ಳಿ ಬೆಳೆಯಲು ಎಕರಗೆ ಕನಿಷ್ಠ ₹40ರಿಂದ ₹50 ಸಾವಿರ ಖರ್ಚು ಮಾಡಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲವಾಗಿದೆ. ಕ್ವಿಂಟಲ್‌ ಈರುಳ್ಳಿ ₹600ಕ್ಕೆ ಕೇಳುತ್ತಾರೆ. ಹೀಗಾದರೆ, ಈರುಳ್ಳಿ ಬೆಳೆಯಲು ಖರ್ಚು ಮಾಡಿದ ಅರ್ಧದಷ್ಟು ಹಣ ಕೂಡ ಸಿಗುವುದಿಲ್ಲ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರ ಈರುಳ್ಳಿ ಬೆಳೆಗಾರರ ಪರಿಹಾರಕ್ಕೆ ತಕ್ಷಣವೇ ₹500 ಕೋಟಿ ಆವರ್ತ ನಿಧಿ ಬಿಡುಗಡೆ ಮಾಡಬೇಕು. ಈ ಆವರ್ತ ನಿಧಿಯನ್ನು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗೆ ತಕ್ಷಣವೇ ಹಾಕಬೇಕು’ ಎಂದು ಒತ್ತಾಯಿಸಿದರು.

‘ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಸರ್ಕಾರ ಮುಂದಾಗಬೇಕು. ಕ್ವಿಂಟಲ್‌ ಈರುಳ್ಳಿಗೆ ₹3,500– ₹4,000 ಬೆಂಬಲ ಬೆಲೆ ನಿಗದಿಪಡಿಸಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಅತಿವೃಷ್ಟಿಯಿಂದ ಜಿಲ್ಲೆಯ ಬಹುತೇಕ ಬೆಳೆಗಳು ಹಾಳಾಗಿವೆ. ಆದರೆ, ರಾಜ್ಯ ಸರ್ಕಾರ ಒಂದು ಹೆಕ್ಟೇರ್‌ಗೆ ಮಾತ್ರ ಪರಿಹಾರ ನೀಡಲು ಯೋಚಿಸಿದೆ. ಇದು ಸರಿಯಲ್ಲ. ಒಬ್ಬ ರೈತನಿಗೆ ಕನಿಷ್ಠ ನಾಲ್ಕು ಎಕರೆಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಶಂಕರಗೌಡ ಜಯನಗೌಡ ಮಾತನಾಡಿ, ‘ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಪ್ರವಾಸ ಮಾಡಿದ್ದು, ಈರುಳ್ಳಿ ಜತೆಗೆ ಗೋವಿನಜೋಳವೂ ಹಾನಿಯಾಗಿದೆ. ಈರುಳ್ಳಿ ಬೆಳೆಹಾನಿ ಬಗ್ಗೆ ಸರ್ಕಾರಕ್ಕೂ ಗೊತ್ತಿದೆ. ಆದರೆ, ರೈತರನ್ನು ರಕ್ಷಿಸಬೇಕು ಎನ್ನುವ ಪರಿಜ್ಞಾನ ಇಲ್ಲ’ ಎಂದು ಕಿಡಿಕಾರಿದರು.

‘ಈ ಸಂಬಂಧ ಸರ್ಕಾರಕ್ಕೆ ಎಂಟು ದಿನಗಳ ಗಡುವು ನೀಡಲಾಗುವುದು. ಅಷ್ಟರ ಒಳಗಾಗಿ ರೈತರ ನೆರವಿಗೆ ಬರದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ರೂಪಿಸಲಾಗುವುದು’ ಎಂದರು.

‘ಬೆಳೆ ಸಮೀಕ್ಷೆ ಸಮರ್ಪಕವಾಗಿ ಆಗಿಲ್ಲ. ಸಮೀಕ್ಷೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ವಿಚಾರ ಅನೇಕ ರೈತರಿಗೆ ಗೊತ್ತೇ ಇಲ್ಲ. ಈ ಬಗ್ಗೆ ಗ್ರಾಮಗಳಲ್ಲಿ ಡಂಗೂರ ಸಾರಬೇಕಿತ್ತು’ ಎಂದು ಹೇಳಿದರು.

‘ಗ್ಯಾರಂಟಿ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯಯಿಸುವ ಸರ್ಕಾರದ ಬಳಿ ರೈತರಿಗೆ ಪರಿಹಾರ ನೀಡಲು ಹಣವಿಲ್ಲವೇ’ ಎಂದು ಪ್ರಶ್ನಿಸಿದರು.

ಜಂತಲಿಶಿರೂರ, ಹರ್ತಿ, ಡೋಣಿ, ಚುರ್ಚಿಹಾಳ ಸೇರಿದಂತೆ ವಿವಿಧ ಗ್ರಾಮಗಳ ರೈತ ನಾಯಕರಾದ ವಿಜಯ ಕೋಳೆಕಾರ, ಸಿದ್ದಪ್ಪ ಮುಕ್ಕಾಣಿ, ಮಂಜನಗೌಡ, ಯಲ್ಲಪ್ಪ ಶಲವಡಿ, ಬಸವಂತಪ್ಪ ವೆಂಕಟಾಪುರ, ಈರಪ್ಪ ಕೊಪ್ಪದ, ಸಿದ್ದಪ್ಪ ವಡ್ಡಟ್ಟಿ, ಮಲ್ಲಪ್ಪ ಮುಂಡವಾಡ, ಚನ್ನಪ್ಪ ಮುರುಡಿ, ನಂದೀಶ್‌ ಹಾನಗಲ್‌, ಬಸವರಾಜ ಕೊಪ್ಪರ, ಮರಿಯಪ್ಪ ಪಾಟೀಲ, ಕಿರಣ ಪವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.