ADVERTISEMENT

ಗದಗ | ಈರುಳ್ಳಿ ದರ ಕುಸಿತ: ಖರ್ಚು, ಶ್ರಮ ವ್ಯರ್ಥ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 30 ಡಿಸೆಂಬರ್ 2025, 20:33 IST
Last Updated 30 ಡಿಸೆಂಬರ್ 2025, 20:33 IST
ಗದಗ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಈರುಳ್ಳಿ ಸ್ವಚ್ಛಗೊಳಿಸುತ್ತಿರುವ ಮಹಿಳೆಯರು
ಗದಗ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಈರುಳ್ಳಿ ಸ್ವಚ್ಛಗೊಳಿಸುತ್ತಿರುವ ಮಹಿಳೆಯರು   

ಗದಗ: ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿದಿದೆ. ಪರಿಣಾಮ ಬಹುತೇಕ ಕಡೆ ಈರುಳ್ಳಿ ಬೆಳೆ ಕಟಾವು ನಡೆಯುತ್ತಿಲ್ಲ. ಕೆಲ ರೈತರು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ, ನಷ್ಟ ಅನುಭವಿಸಿದ್ದಾರೆ. ಕೆಲವರು ಕುರಿ, ಮೇಕೆ ಮತ್ತು ದನಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.

ಗದಗ ತಾಲ್ಲೂಕಿನ ತಿಮ್ಮಾಪುರ, ಹರ್ಲಾಪುರ ಭಾಗದಿಂದ ನಿತ್ಯ 10 ಕ್ಯಾಂಟರ್‌ಗಳಷ್ಟು ಈರುಳ್ಳಿ ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ(ಎಪಿಎಂಸಿ) ತಲುಪುತ್ತಿದೆ. ಒಂದು ಕ್ವಿಂಟಲ್‌ ಈರುಳ್ಳಿ ಬೆಂಗಳೂರು ತಲುಪುವ ಹೊತ್ತಿಗೆ ₹150 ವೆಚ್ಚವಾಗುತ್ತದೆ. ಆದರೆ, ಗುಣಮಟ್ಟ ಕಡಿಮೆ ಇರುವ ಈರುಳ್ಳಿಗೆ ಅಷ್ಟು ಬೆಲೆ ಸಿಗುತ್ತಿಲ್ಲ. 

‘ರೈತರು ಒಯ್ಯುವ ಎಲ್ಲಾ ಈರುಳ್ಳಿಗೂ ವ್ಯಾಪಾರಿಗಳು ಒಂದೇ ದರ ನಿಗದಿಪಡಿಸುವುದಿಲ್ಲ. ಕೊಂಡೊಯ್ದ ಈರುಳ್ಳಿಗಳನ್ನು ಗ್ರೇಡಿಂಗ್ ಮಾಡುತ್ತಾರೆ. ಗುಣಮಟ್ಟಕ್ಕೆ ಉತ್ತಮ ಬೆಲೆ, ಎರಡು ಮತ್ತು ಮೂರನೇ ದರ್ಜೆಗೆ ಕನಿಷ್ಠ ಬೆಲೆ ನಿಗದಿ ಮಾಡುತ್ತಾರೆ. ಇದರಿಂದ ತುಂಬಾ ನಷ್ಟವಾಗುತ್ತಿದೆ’ ಎಂದು ರೈತರು ನೊಂದು ನುಡಿಯುತ್ತಾರೆ.

ADVERTISEMENT

‘ತಿಮ್ಮಾಪುರದ ರೈತ ಶಿವಪ್ಪ ಬಾಬರಿ ಡಿ.27ರಂದು 29 ಕ್ವಿಂಟಲ್‌ ಈರುಳ್ಳಿಯನ್ನು ಯಶವಂತಪುರ ಎಪಿಎಂಸಿಗೆ ಒಯ್ದಿದ್ದರು. ಅದರಲ್ಲಿ 10 ಕ್ವಿಂಟಲ್‌ ಈರುಳ್ಳಿಗೆ ಮಾತ್ರ ₹850 ದರ ಸಿಕ್ಕಿದೆ. ಉಳಿದಂತೆ ವರ್ಗೀಕರಣದ ಅನುಸಾರ ಕ್ವಿಂಟಲ್‌ಗೆ ₹500, ₹250 ಮತ್ತು ₹150 ದರ ಸಿಕ್ಕಿದೆ. ಲಾರಿ ಬಾಡಿಗೆ, ಹಮಾಲಿ ಖರ್ಚು ಕಳೆದು ₹24,530 ಹಣ ಸಿಕ್ಕಿದೆ. ಆದರೆ, ಈರುಳ್ಳಿ ಬೆಳೆಯಲು ಅವರು ಖರ್ಚು ಮಾಡಿದ್ದು ಎಕರೆಗೆ ₹40 ಸಾವಿರ. ಹಾಕಿದ್ದ ಹಣದ ಜತೆಗೆ ನಾಲ್ಕು ತಿಂಗಳ ಶ್ರಮಕ್ಕೂ ಬೆಲೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಮುಖಂಡ ಯಲ್ಲಪ್ಪ ಬಾಬರಿ ಬೇಸರ ವ್ಯಕ್ತಪಡಿಸಿದರು.

‘ಹೆಚ್ಚು ಆದಾಯ ಗಳಿಸಬಹುದು ಎಂದು ಈರುಳ್ಳಿ ಬಿತ್ತನೆ ಮಾಡಿದ್ದ ರೈತರು ಸದ್ಯ ಆಘಾತದ ಸ್ಥಿತಿಯಲ್ಲಿದ್ದಾರೆ. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಮಾರುಕಟ್ಟೆಗೆ ಒಯ್ದರೆ, ಲಾರಿ ಬಾಡಿಗೆ, ಕೂಲಿ ಖರ್ಚು ವೆಚ್ಚ ಮೈಮೇಲೆ ಬರುತ್ತದೆ. ಕೆಲ ರೈತರು ಈರುಳ್ಳಿ ಮಾರಿ ಯಶವಂತಪುರ ಮಾರುಕಟ್ಟೆಯಿಂದ ಖಾಲಿ ಕೈಯಲ್ಲಿ ಮನೆಗೆ ಹಿಂದಿರುಗಿದ ಉದಾಹರಣೆಗಳಿವೆ. ಹಾಗಾಗಿ, ಸರ್ಕಾರ ಮಧ್ಯೆ ಪ್ರವೇಶಿಸಿ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಿ ರೈತರ ಹಿತ ಕಾಪಾಡಬೇಕು’ ಎಂದು ರೈತ ಬಾಳಪ್ಪ ಗಂಗರಾತ್ರಿ ಹೇಳಿದರು.

ಈರುಳ್ಳಿ ಹೆಚ್ಚು ಬೆಳೆಯುವ ರಾಜ್ಯಗಳ ರೈತರು ಈರುಳ್ಳಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿಟ್ಟು ಬೆಲೆ ಸಿಕ್ಕಾಗ ಮಾರುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಈ ವ್ಯವಸ್ಥೆ ಇಲ್ಲ. ರೈತರಿಗೂ ತರಬೇತಿಯು ಇಲ್ಲ.
ಯಲ್ಲಪ್ಪ ಬಾಬರಿ ರೈತ ಮುಖಂಡ
ರೈತ ಶಿವಪ್ಪ ಬಾಬರಿ ಯಶವಂತಪುರದ ಎಪಿಎಂಸಿಯಲ್ಲಿ ಈರುಳ್ಳಿ ಮಾರಿದ ರಶೀದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.