ADVERTISEMENT

ಸಾವಯವ ಕೃಷಿಯಲ್ಲಿ ಮೇರು ಸಾಧನೆ; ಸ್ವತಃ ಮಾರುಕಟ್ಟೆ ಕಂಡುಕೊಂಡ ರೈತರು

ಸಾಂಪ್ರದಾಯಿಕ ಕೃಷಿಯಲ್ಲಿ ನೆಮ್ಮದಿ ಕಂಡ ದೇವರಡ್ಡಿ ಕುಟುಂಬ; ಸ್ವತಃ ಮಾರುಕಟ್ಟೆ ಕಂಡುಕೊಂಡ ರೈತ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:54 IST
Last Updated 6 ಮೇ 2022, 4:54 IST
ಸಾವಯವ ಕೃಷಿ ಮಾದರಿಯಲ್ಲಿ ಬೆಳೆದ ಸಿರಿಧಾನ್ಯ ಬೆಳೆ. ಸರೋಜಿನಿ ಅಗಸನಕೊಪ್ಪ ಇದ್ದಾರೆ 
ಸಾವಯವ ಕೃಷಿ ಮಾದರಿಯಲ್ಲಿ ಬೆಳೆದ ಸಿರಿಧಾನ್ಯ ಬೆಳೆ. ಸರೋಜಿನಿ ಅಗಸನಕೊಪ್ಪ ಇದ್ದಾರೆ    

ಶಿರಹಟ್ಟಿ:ರಾಸಾಯನಿಕ ಕೃಷಿಯ ಗೋಜಿಗೆ ಹೋಗದೆಸಾವಯವ ಕೃಷಿಯಲ್ಲಿ ವಿವಿಧ ಬಗೆಯ ಬೆಳೆಗಳನ್ನು ಬೆಳೆದು ರಾಜ್ಯ,ಅಂತರರಾಜ್ಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ ರೈತ ದೇವರಡ್ಡಿ ಅಗಸನಕೊಪ್ಪ ಮತ್ತು ಅವರ ಕುಟುಂಬ.

ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಹೆಚ್ಚು ಒತ್ತು ನೀಡಿ,ಸಾವಯವ ಕೃಷಿಯಲ್ಲಿ ನಿರಂತರ ನೆಮ್ಮದಿ ಕಂಡ ಕುಟುಂಬ ಅಗಸನಕೊಪ್ಪನವರದು. ತಾಲ್ಲೂಕಿನ ಕಡಕೋಳ ಗ್ರಾಮದ ಕಪ್ಪತ್ತಗುಡ್ಡದ ತಪ್ಪಲಿನ ಸೆರಗಿನಲ್ಲಿ 20 ವರ್ಷಗಳಿಂದಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಸುಮಾರು 46 ಎಕರೆ ಜಮೀನು ಹೊಂದಿರುವ ದೇವರಡ್ಡಿ ಅಗಸನಕೊಪ್ಪ, ಅವರ ತಾಯಿ ಸರೋಜಿನಿ ಹಾಗೂ ಕುಟುಂಬದೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೇವಲ ಸಾವಯವ ಕೃಷಿಯ ಬೆಳೆಗಳನ್ನು ಮಾರಾಟ ಮಾಡಲು ಜಿಲ್ಲಾ ಕೇಂದ್ರದಲ್ಲಿ ಧರಿತ್ರಿ ಕೃಷಿ ಪರಿವಾರ ಎಂಬ ಸಂಸ್ಥೆ ಸ್ಥಾಪಿಸಲಾಗಿದ್ದು, ಅದರ ಕಾರ್ಯದರ್ಶಿಯಾಗಿ ದೇವರಡ್ಡಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ತೋಟದಲ್ಲಿನ ಸಾವಯುವ ಬೆಳೆಗಳು ಬೆಂಗಳೂರು, ಅಹಮದಾಬಾದ್, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ.

ADVERTISEMENT

ಮಾವಿನ ತಳಿ ಹಾಗೂ ಇತರೆ ಹಣ್ಣಿನ ಬೆಳೆ:

46 ಎಕರೆ ಪೈಕಿ 26 ಎಕರೆ ಜಮೀನಿನಲ್ಲಿ ಕೇಸರ, ಮಲ್ಲಿಕಾ, ಬೆನ್ಸಿ, ದಸೆರಿ, ಮಲಗೋಬಾ, ಬರಮಾಸಿ, ಅಮರಪಲ್ಲಿ, ಲಾಂಗ್ರಾ ತೋತಾಪುರಿ ಸೇರಿದಂತೆ ವಿವಿಧ ತಳಿಯ ಮಾವು ಬೆಳೆಯುತ್ತಿದ್ದಾರೆ. ಇದರೊಂದಿಗೆ ಮೂಸಂಬಿ, ಸೀತಾಫಲ, ಚಿಕ್ಕು, ದಾಳಿಂಬೆ, ಗೋಡಂಬಿ, ಬಾಳೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಬೆಳೆಯುತ್ತಿದ್ದಾರೆ. ಇವುಗಳಿಗೆ ಯಾವುದೇ ರಾಸಾಯನಿಕ ಸಿಂಪಡಣೆ ಮಾಡದೆ ಬೆಳೆಸುತ್ತಿರುವುದು ವಿಶೇಷ.

ಸಿರಿಧಾನ್ಯಗಳ ಕಣಜ:

ಅಪ್ಪಟ ದೇಸಿ ಕೃಷಿ ಸಂಪ್ರದಾಯಕ್ಕೆ ಒತ್ತು ನೀಡುತ್ತಿರುವ ಅಗಸನಕೊಪ್ಪ ಕುಟುಂಬ ನವಣೆ, ಸಾವಿ, ಸಜ್ಜೆ, ಕೂರಲು, ಉದಲು ಸೇರಿದಂತೆ ವಿವಿಧ ಬಗೆಯಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಇದರೊಂದಿಗೆ ಶೇಂಗಾ, ಕಡಲೆ, ತೊಗರಿ, ಸೇರಿದಂತೆದ್ವಿದಳ ಬೆಳೆಗಳು ಹಾಗೂ ವಿವಿಧ ತರಕಾರಿ ಬೆಳೆಗಳನ್ನು ಸಹ ಬೆಳೆಯುತ್ತಿದ್ದಾರೆ.

ದೇಸಿ ತಳಿಯ ಹಸುಗಳ ಸಾಕಣೆ:

ಸುಮಾರು 45 ದೇಸಿ ತಳಿಯ ಹಸುಗಳನ್ನು ಪೋಷಣೆ ಮಾಡುತ್ತಿದ್ದು, ಅದರಲ್ಲಿ ಅಪ್ಪಟ ದೇಸಿ ತಳಿಯ ಹಸುಗಳಾದ ಗೀರ್, ಅಮೃತಮಹಲ್, ಮಲೆನಾಡಗಿಡ್ಡ, ಹಳ್ಳಿಕಾರ್ ಹಸುಗಳನ್ನು ಸಾಕಲಾಗುತ್ತಿದೆ. ಅದರ ಸಗಣಿಯ ಮೂಲಕ ಘನ ಜೀವಾಮೃತ ಸೇರಿದಂತೆ ವಿವಿಧ ರೀತಿಯಔಷಧಿಗಳನ್ನು ತಯಾರಿಸಿ ಬೆಳೆಗಳಿಗೆ ಸಿಂಪಡಿಸಲಾಗುತ್ತಿದ್ದು, ಇದರಿಂದ ಬೆಳೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಪ್ರಶಸ್ತಿಗೆ ಭಾಜನ:

ಸಾವಯವ ಕೃಷಿಯಲ್ಲಿ ವಿವಿಧ ತಳಿಗಳ ಬೆಳೆಗಳನ್ನು ಬೆಳೆದ ಅಗಸನಕೊಪ್ಪ ಕುಟುಂಬಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಕುಟುಂಬದ ಮುಖಸ್ಥರಾದ ಸರೋಜಿನಿ ಅವರಿಗೆ 2020ರಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂದ ‘ಕೃಷಿ ಶಿರೋಮಣಿ’ ಪ್ರಶಸ್ತಿ, ‘ಜಿಲ್ಲಾ ಶ್ರೇಷ್ಠ ಕೃಷಿ ಮಹಿಳೆ’ ಪ್ರಶಸ್ತಿ, ಆರ್ಗ್ಯಾನಿಕ್‌ ಇಂಡಿಯಾ ಸಂಸ್ಥೆಯಿಂದ ‘ಧರ್ತಿಮಿತ್ರ’ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಸಂದಿವೆ.

ಕಡಕೋಳ ಹಾಗೂ ಹೊಸಳ್ಳಿಯ ಸುಮಾರು 15 ಜನ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ₹ 250 ರಿಂದ 300 ಕೂಲಿ ನೀಡಲಾಗುತ್ತಿದ್ದು, ಎಲ್ಲರೂ ಕುಟುಂಬದವರಂತೆ ಇದ್ದೇವೆ.

-ದೇವರಡ್ಡಿ ಅಗಸನಕೊಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.