ADVERTISEMENT

ಪಂಚಮಸಾಲಿ ಸಮಾವೇಶ: ಸಾವಿರಾರು ಮಂದಿ ಭಾಗಿ

ಫೆ.21ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ಸಮುದಾಯದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 6:27 IST
Last Updated 19 ಫೆಬ್ರುವರಿ 2021, 6:27 IST

ಗದಗ: ಪಂಚಮಸಾಲಿ ಸಮುದಾಯವು 2ಎ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆ ಬೆಂಗಳೂರು ತಲುಪಿದೆ. ಫೆ. 21ರಂದು ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಗದಗ ಜಿಲ್ಲೆಯಿಂದ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಮೋಹನ ಮಾಳಶೆಟ್ಟಿ ಅವರು ತಿಳಿಸಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿಗೆ ಆಗ್ರಹಿಸಿ ನಡೆಸಿರುವ ಪಾದಯಾತ್ರೆಗೆ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಮುಖಂಡರು, ಮಹಿಳೆಯರು, ಯುವಕರು ಸೇರಿಕೊಂಡಿದ್ದರಿಂದ ಹೋರಾಟ ಮತ್ತಷ್ಟು ಗಟ್ಟಿಗೊಂಡಿದೆ’ ಎಂದರು.

‘ಪಂಚಮಸಾಲಿ ಸಮುದಾಯ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ನೀಡಲಾಗುವುದು. ನಮ್ಮ ಬೇಡಿಕೆಗಳನ್ನು ಅವರು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಜಿಲ್ಲೆಯಿಂದ 275 ಬಸ್‌ಗಳು ಸೇರಿದಂತೆ ಖಾಸಗಿ ವಾಹನಗಳ ಮೂಲಕವೂ ಜನ ತೆರಳಲಿದ್ದಾರೆ. ಸಮಾಜದ ಮುಖಂಡರು ಕಾರಿನಲ್ಲೂ ಜನರನ್ನು ಕರೆದೊಯ್ಯಲಿದ್ದಾರೆ’ ಎಂದು ತಿಳಿಸಿದರು.

ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಕೊಪ್ಪ ಮಾತನಾಡಿ, ‘ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಹೊಸದೇನಲ್ಲ. ಸಮಾಜದಲ್ಲಿ ಶೇ 30ರಷ್ಟು ಶ್ರೀಮಂತರಿದ್ದರೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು ಇನ್ನೂ ಶೇ 70ರಷ್ಟು ಜನರಿದ್ದಾರೆ. ಹೀಗಾಗಿ ಈ ಬಗ್ಗೆ 1994ರಿಂದಲೇ ಹೋರಾಟ ನಡೆಸಿಕೊಂಡು ಬರಲಾಗಿದೆ. ನಮ್ಮ ಈ ಹೋರಾಟ ಯಾವುದೇ ಸಮಾಜದ ವಿರುದ್ಧವಲ್ಲ. ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ’ ಎಂದರು.

ಸಮುದಾಯದ ಮುಖಂಡ ಮಹೇಶ ಕರಿಬಿಷ್ಠಿ ಮಾತನಾಡಿ, ‘ಬೆಟಗೇರಿಯಿಂದ 5 ಬಸ್, 25 ಮಿನಿಗಾಡಿ ಸೇರಿ ಹಲವು ಕಾರುಗಳ ಮೂಲಕ ಜನರು ಸಮಾವೇಶಕ್ಕೆ ತೆರಳಲಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಅಯ್ಯಪ್ಪ ಅಂಗಡಿ, ಮುಖಂಡರಾದ ಅನಿಲ ಕುಮಾರ ಪಾಟೀಲ, ಸಿದ್ದು ಪಲ್ಲೇದ, ಎಂ.ಎಸ್. ಚಿನ್ನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.