ADVERTISEMENT

ಹಸಿರ ಸಿರಿಯಲ್ಲಿ ಮಯೂರ ನರ್ತನ..!

ನವಿಲುಧಾಮ ಸ್ಥಾಪಿಸಲು ರೈತರ, ಪರಿಸರ ಪ್ರೇಮಿಗಳ ಒತ್ತಾಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ನವೆಂಬರ್ 2019, 13:38 IST
Last Updated 28 ನವೆಂಬರ್ 2019, 13:38 IST
ನರೇಗಲ್–ಜಕ್ಕಲಿ ಮಧ್ಯ ಬರುವ ಹೊಲವೊಂದರಲ್ಲಿ ಕಂಡು ಬಂದ ನವಿಲು
ನರೇಗಲ್–ಜಕ್ಕಲಿ ಮಧ್ಯ ಬರುವ ಹೊಲವೊಂದರಲ್ಲಿ ಕಂಡು ಬಂದ ನವಿಲು   

ನರೇಗಲ್: ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಹೋಬಳಿ ವ್ಯಾಪ್ತಿಯಲ್ಲಿ ಹಸಿರು ಚಿಗುರಿದ್ದು, ಆಹಾರ, ನೀರು ಅರಸಿಕೊಂಡು ಸಾಕಷ್ಟು ಸಂಖ್ಯೆಯಲ್ಲಿ ನವಿಲುಗಳು ಗ್ರಾಮದ ಹೊರವಲಯದ ಜಮೀನುಗಳಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಿವೆ.

ಬೆಳಿಗ್ಗೆ 9 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ನಂತರ ಮಾರನಬಸರಿ ಮಾರ್ಗದ ಹಳ್ಳ, ಜಕ್ಕಲಿ ರಸ್ತೆಯ ತೋಟಗಳು, ಹಂಚಿನಾಳ ರಸ್ತೆಯ ಹಳ್ಳ, ಹಾಲಕೆರೆ ಗ್ರಾಮದ ಒಳದಾರಿಯ ಹಳ್ಳ, ದ್ಯಾಂಪುರ ಸಮೀಪದ ಹಳ್ಳ, ದರ್ಗಾದ ವರ್ತಿ, ಅಬ್ಬಿಗೇರಿಯ ಕಂಠಿ ಬಸವೇಶ್ವರ ದೇವಸ್ಥಾನದ ಸುತ್ತ, ಕೋಟುಮಚಗಿಯ ಹಳ್ಳ ಪ್ರದೇಶಗಳಲ್ಲಿ ಮಯೂರ ದರ್ಶನವಾಗುತ್ತಿದೆ.

ತಾಲ್ಲೂಕಿನ ಗಜೇಂದ್ರಗಡ, ಭೈರಾಪುರ, ಕಾಲಕಾಲೇಶ್ವರ, ನೆಲ್ಲೂರ ಪ್ಯಾಟೆ ಗುಡ್ಡದ ಪ್ರದೇಶಗಳಲ್ಲಿ ನವಿಲುಗು ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಗರಿ ಬಿಚ್ಚಿ ನರ್ತಿಸುವ ನವಿಲುಗಳು ನೋಡುಗರ ಕಣ್ಣಿಗೆ ರಸದೌಣತ ಉಣಬಡಿಸುತ್ತಿವೆ. ರೈತರಿಗೆ, ಕೃಷಿ ಕಾರ್ಮಿಕರಿಗೆ, ಕುರಿಗಾಯಿಗಳಿಗೆ, ದನ ಮೇಯಿಸುವವರಿಗೆ, ಬೆಳಿಗ್ಗೆ ಹಾಗೂ ಸಂಜೆ ಹೊತ್ತು ವಾಯುವಿಹಾರಕ್ಕೆ ಹೊರಟವರಿಗೆ ನವಿಲುಗಳು ಕಾಣಸಿಗುತ್ತಿವೆ.

ADVERTISEMENT

‘ನವಿಲು ರೈತರ ಮಿತ್ರಪಕ್ಷಿ. ಇತ್ತೀಚೆಗೆ ಗುಂಪು ಗುಂಪಾಗಿ ಇವು ಕಾಣಿಸುತ್ತಿವೆ. ಹೋಬಳಿ ವ್ಯಾಪ್ತಿಯ ಪ್ರದೇಶ ನವಿಲುಗಳ ಆವಾಸಕ್ಕೆ ಪೂರಕವಾಗಿದೆ’ ಎಂದು ನರೇಗಲ್‌ನ ಮಂಜಪ್ಪ ಸಕ್ರಿ, ಮಲ್ಲಪ್ಪ ಕಣವಿ ಹೇಳಿದರು.

ಹೋಬಳಿ ವ್ಯಾಪ್ತಿಯ ಜನರಿಗೆ ನವಿಲಿನ ಮೇಲೆ ವಿಶೇಷ ಮಮತೆ. ಹೀಗಾಗಿ ರೈತರೇ ಇವುಗಳ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ನವಿಲಿಗೆ ತೊಂದರೆ ಕೊಡುವ ಕಿಡಿಗೇಡಿಗಳನ್ನು ಕಂಡರೆ ಅವರಿಗೆ ಬೈಯ್ದು, ಬುದ್ದಿ ಹೇಳಿ ಕಳುಹಿಸುತ್ತಾರೆ. ಜಮೀನುಗಳಲ್ಲಿ ಕಂಡುಬರುವ ಕ್ರಿಮಿ, ಕೀಟಗಳೇ ನವಿಲುಗಳಿಗೆ ಆಹಾರವಾಗಿದ್ದು, ನವಿಲುಗಳಿಲಂದ ಬೆಳೆಗಳ ರಕ್ಷಣೆಗೆ ರೈತರಿಗೆ ಅನುಕೂಲವಾಗಿದೆ.

‘ಹಾವು ಹಾಗೂ ವಿಷ ಜಂತುಗಳು ನವಿಲು ಇರುವ ಭಾಗದಲ್ಲಿ ಹೆಚ್ಚಾಗಿ ಕಾಣಿಸುವುದಿಲ್ಲ’ಎಂದು ರೈತ ಶಾಂತಯ್ಯ ಬೆಳವಣಕಿಮಠ, ಪ್ರಶಾಂತ ಗಾಳಪೂಜಿಮಠ, ಈರಪ್ಪ ಮುಂದಿನಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.