ADVERTISEMENT

ಲಕ್ಷ್ಮೇಶ್ವರ: ಒಟಿಸಿಯಲ್ಲಿ ಗೊಂದಲ, ಜನರ ಪರದಾಟ

ಸಮಯಕ್ಕೆ ಸಿಗದ ಜಾತಿ– ಆದಾಯ ಪ್ರಮಾಣ ಪತ್ರ

ನಾಗರಾಜ ಎಸ್‌.ಹಣಗಿ
Published 5 ಸೆಪ್ಟೆಂಬರ್ 2020, 8:56 IST
Last Updated 5 ಸೆಪ್ಟೆಂಬರ್ 2020, 8:56 IST

ಲಕ್ಷ್ಮೇಶ್ವರ: ಆದರೆ ಒಟಿಸಿ ಮಾಡುವವರು ಎಸಗಿರುವ ತಪ್ಪಿನಿಂದಾಗಿ ಜನರಿಗೆ ಜಾತಿ, ಆದಾಯ
ಮತ್ತು ರಹವಾಸಿ ಪ್ರಮಾಣಪತ್ರಗಳು ಸಕಾಲಕ್ಕೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ನಿತ್ಯವೂ ಜನರು ಕಚೇರಿಗೆ ಅಲೆಯಬೇಕಾಗಿದೆ.

ಜಾತಿ, ಆದಾಯ ಮತ್ತು ರಹವಾಸಿ ಪ್ರಮಾಣ ಪತ್ರಗಳಿಗಾಗಿ ಸಾರ್ವಜನಿಕರು ಪದೇ ಪದೇ ಅರ್ಜಿ ಸಲ್ಲಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪಡಿತರ ಮತ್ತು ಆಧಾರ ಕಾರ್ಡ್‍ಗಳಿಗೆ ಸಾರ್ವಜನಿಕರ ಜಾತಿ, ಆದಾಯ ಮತ್ತು ರಹವಾಸಿ ಕುರಿತ ಮಾಹಿತಿಯನ್ನು ಲಿಂಕ್ ಮಾಡುವ ಉದ್ದೇಶದಿಂದ 2016-17ರಲ್ಲಿ ಸರ್ಕಾರ ಒಟಿಸಿ (ಒವರ್‌ ದಿ ಕೌಂಟರ್) ಕಾರ್ಯಕ್ಕೆ ಚಾಲನೆ ನೀಡಿತ್ತು. ಒಂದು ಬಾರಿ ಒಟಿಸಿಯಲ್ಲಿ ಮಾಹಿತಿ ಹಾಕಿದ ನಂತರ ಸಾರ್ವಜನಿಕರಿಗೆ ಒಟಿಸಿ ನಂಬರ್ ನೀಡಲು ಸರ್ಕಾರ ನಿರ್ಧರಿಸಿತ್ತು. ಈ ನಂಬರ್‍ ಅನ್ನೆ ಉಪಯೋಗಿಸಿ ಸಾರ್ವಜನಿಕರು ತಮಗೆ ಬೇಕಾದ ಪ್ರಮಾಣ ಪತ್ರಗಳನ್ನು ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿಯೂ ಪಡೆದುಕೊಳ್ಳುವುದು ಯೋಜನೆಯ ಉದ್ದೇಶವಾಗಿತ್ತು.

ಒಟಿಸಿ ಕಾರ್ಯಕ್ಕೆ ಸರ್ಕಾರ ತನ್ನ ಇಲಾಖೆ ನೌಕರರನ್ನು ಹೊರತುಪಡಿಸಿ, ಖಾಸಗಿ ವ್ಯಕ್ತಿಗಳನ್ನು ಸಹ (ಥರ್ಡ್‌ಪಾರ್ಟಿ) ನೇಮಕ ಮಾಡಿಕೊಂಡಿತ್ತು. ಹೀಗೆ ನೇಮಕಗೊಂಡವರು ಸಾರ್ವಜನಿಕರ ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ ಅದನ್ನು ಕಂದಾಯ ಇಲಾಖೆಗೆ ಸಲ್ಲಿಸಬೇಕಾಗಿತ್ತು.ಆದರೆ ಅವರು ಮನೆ ಮನೆಗೆ ಭೇಟಿ ನೀಡದೆ ತಮಗೆ ತಿಳಿದಂತೆ ಮಾಹಿತಿ ಸಂಗ್ರಹಿಸಿ ಕೊಟ್ಟಿರುವುದೇ ಅವಾಂತರಕ್ಕೆ ಕಾರಣಎಂಬ ಆರೋಪ ಕೇಳಿಬಂದಿದೆ.

ADVERTISEMENT

‘ನಮ್ಮದು ಹಿಂದೂ ಸಾದರ ಅಂತಾ ಜಾತಿ ಪ್ರಮಾಣಬರಬೇಕು. ಆದರೆ ಹಿಂದೂ ಕುರುಬ ಎಂದು ಬರುತ್ತಿದೆ. ಜಾತಿ ಪ್ರಮಾಣ ಪತ್ರಕ್ಕಾಗಿ ತಿರುಗಾಡಿ ಸಾಕಾಗಿದೆ’ ಎಂದು ಗುರುವಾರನೆಮ್ಮದಿಕೇಂದ್ರಕ್ಕೆ ಜಾತಿ ಪ್ರಮಾಣ ಪತ್ರಕ್ಕಾಗಿ ಬಂದಿದ್ದ ಇಲ್ಲಿನ ನಿವಾಸಿ ಮಲ್ಲನಗೌಡ ಪಾಟೀಲ ಅಳಲು ತೋಡಿಕೊಂಡರು.

‘ಒಟಿಸಿ ಮಾಡುವ ಸಂದರ್ಭದಲ್ಲಿ ಇಂಥ ತಪ್ಪುಗಳು ಆಗಿದ್ದು ಇದನ್ನು ಜಿಲ್ಲಾ ಉಪವಿಭಾಗಾಧಿಕಾರಿಗಳು ಸರಿಪಡಿಸಿ ಕೊಡುತ್ತಿದ್ದಾರೆ. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಜನರಿಗೆ ಆದಷ್ಟು ಬೇಗನೇ ಪ್ರಮಾಣಪತ್ರಗಳು ಸಕಾಲಕ್ಕೆ ಸರಿಯಾಗಿ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದು ತಹಶೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.