
ಶಿರಹಟ್ಟಿಯ ಪೊಲೀಸ್ ಠಾಣೆ ಎದುರಗಡೆ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಕಾರ್ಯಕರ್ತರು ಧರಣಿ ನಡೆಸಿದರು
ಶಿರಹಟ್ಟಿ: ‘ಇಸ್ಪೀಟು ಕಾರಣವನ್ನಿಕೊಟ್ಟುಕೊಂಡು ಪಿಎಸ್ಐ ಈರಪ್ಪ ರಿತ್ತಿ ಹಾಗೂ ಇಬ್ಬರು ಸಿಬ್ಬಂದಿ ಲಂಬಾಣಿ ಸಮಾಜದ ವ್ಯಕ್ತಿಯನ್ನು ಅರೆಬೆತ್ತಲೆ ಮಾಡಿ ಮನಬಂದಂತೆ ಅಮಾನುಷವಾಗಿ ಥಳಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವವರೆಗೆ ಧರಣಿ ಕೈಬಿಡುವುದಿಲ್ಲ’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆ ಎದುರು ಕಾರ್ಯಕರ್ತರೊಂದಿಗೆ ಮಂಗಳವಾರ ರಾತ್ರಿ ದಿಢೀರ್ ಪ್ರತಿಭಟನೆ ಕೈಗೊಂಡು ಮಾತನಾಡಿದ ಅವರು, ‘ಮೂರ್ನಾಲ್ಕು ದಿನಗಳ ಹಿಂದೆ ಇಸ್ಪೀಟು ಆಡುತ್ತಿದ್ದ ಎಂದು ಆರೋಪಿಸಿ ದೇವಿಹಾಳ ತಾಂಡಾದ ಸೋಮಪ್ಪ ಬೂದೆಪ್ಪ ಲಮಾಣಿ (35) ಎಂಬ ವ್ಯಕ್ತಿಯನ್ನು ಪಿಎಸ್ಐ ಈರಪ್ಪ ರಿತ್ತಿ ಹಾಗೂ ಅವರ ಇಬ್ಬರು ಸಿಬ್ಬಂದಿ ಮನಬಂದಂತೆ ಹೊಡೆದಿದ್ದಾರೆ. ಅವನನ್ನು ಅರೆಬೆತ್ತಲೆ ಮಾಡಿ ಗುಪ್ತಾಂಗಗಳಿಗೆ ಹೊಡೆದಿದ್ದು, ಲಕ್ಷ್ಮೇಶ್ವರದ ತಾಲ್ಲೂಕು ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಹರಿಹಾಯ್ದರು.
‘ಈ ಕುರಿತು ಪ್ರಕರಣ ದಾಖಲಿಸುವಂತೆ ಸಮಾಜದ ಎಲ್ಲಾ ಹಿರಿಯರು ಸಿಪಿಐ ಹತ್ತಿರ ಕೇಳಿಕೊಂಡಾಗ ಅವರು ಒಂದು ದಿನದ ಕಾಲಾವಧಿ ಕೇಳಿ, ಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಇದರಲ್ಲಿ ಭಾಗಿಯಾದ ಸಿಬ್ಬಂದಿಯನ್ನು ಅಮಾನತುಗೊಳಿಸುವುದಾಗಿ ಹೇಳಿದ್ದರು. ಡಿವೈಎಸ್‌ಪಿ ಬಂದು ಪ್ರಕರಣ ದಾಖಲಿಸುತ್ತಾರೆಂದು ಇಲ್ಲೀವರೆಗೆ ಕಾಯ್ದರೂ ಬಂದಿಲ್ಲ. ಇಂತಹ ದುರ್ಘಟನೆ ನಡೆದರೂ ಡಿವೈಎಸ್‌ಪಿ ಇನ್ನೂ ತನಿಖೆ ಮಾಡುವುದಾಗಿ ಹೇಳುತ್ತಿದ್ದಾರೆ. ಕಾನೂನುಬಾಹಿರವಾದ ಇಂತಹ ಘಟನೆಗಳು ಪಿಎಸ್ಐ ಈರಪ್ಪ ರಿತ್ತಿ ಅವರಿಗೆ ಸಾಮಾನ್ಯವಾಗಿದೆ’ ಎಂದು ಆರೋಪ ಮಾಡಿದರು.
‘ಈ ಹಿಂದೆ ಶಿರಹಟ್ಟಿ ಠಾಣೆಯಲ್ಲಿದ್ದಾಗ ಸಂಗೊಳ್ಳಿ ರಾಯಣ್ಣನ ಜಯಂತ್ಯುತ್ಸವ ಮೆರವಣಿಗೆಯಲ್ಲಿ ಯುವಕರನ್ನು ಮನಬಂದಂತೆ ಥಳಿಸಿದ್ದರು. ಇಲ್ಲಿಂದ ಲಕ್ಷ್ಮೇಶ್ವರ ಠಾಣೆಗೆ ಬಂದು ಅಲ್ಲಿ ಗೋಸಾವಿ ಸಮಾಜದದವರ ಮೇಲೆ ವಿನಾಃಕಾರಣ ಲಾಠಿಚಾರ್ಜ್ ಮಾಡಿ ಅಲ್ಲಿಂದ ದೊಡ್ಡ ಪ್ರತಿಭಟನೆ ಮಾಡಿ ಅವರನ್ನು ವರ್ಗಾಯಿಸಲಾಗಿತ್ತು. ಇಂತಹ ಘಟನೆಗಳ ರೂವಾರಿಯಾದ ಪಿಎಸ್ಐ ರಿತ್ತಿ ಅವರನ್ನು ಪುನಃ ಇಲ್ಲಿಗೆ ನೇಮಕ ಮಾಡಿರುವುದು ಬಹುದೊಡ್ಡ ದುರಂತ. ಇಂತಹ ಅನೇಕ ಕರ್ತವ್ಯ ಲೋಪವೆಸಗಿದ ಇವರನ್ನು ಕೂಡಲೇ ಇಲ್ಲಿಂದ ವರ್ಗಾಯಿಸಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಂಕರ ಮರಾಠೆ, ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ದೀಪು ಕಪ್ಪತ್ತನವರ, ಜಾನು ಲಮಾಣಿ, ಅಕ್ಬರ್ ಯಾದಗಿರಿ, ಶ್ರೀನಿವಾಸ, ಪರಶುರಾಮ ಡೊಂಕಬಳ್ಳಿ, ರಾಮಣ್ಣ ಕಂಬಳಿ, ಥಾವರೆಪ್ಪ ಲಮಾಣಿ, ವಿಠಲ ಬಿಡವೆ, ದೇವು ಪೂಜಾರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸೋಮಪ್ಪ ಲಮಾಣಿ ಅವರ ಪ್ರಕರಣ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.ರೋಹನ್ ಜಗದೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.