
ಗದಗ: ‘ಪ್ರಜೆಗಳ ಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಿ, ಪರಿಹಾರ ಒದಗಿಸುವ ‘ಪ್ರಭುವಿನೆಡೆಗೆ ಪ್ರಭುತ್ವ’ ಕಾರ್ಯಕ್ರಮದ ಆರನೇ ಎಸ್‌ಒಎಸ್ ಲೋಕಾರ್ಪಣೆ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಮುಳಗುಂದ ನಾಕಾದಲ್ಲಿ ಗುರುವಾರ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮದ 6ನೇ ಎಸ್‌ಒಎಸ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
‘ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಸಿಗಬೇಕು ಎನ್ನುವ ಉದ್ದೇಶದಿಂದ ಪ್ರಭುವಿನೆಡೆಗೆ ಪ್ರಜಾಪ್ರಭುತ್ವ ಕಾರ್ಯಕ್ರಮ ಅನುಷ್ಟಾನ ಮಾಡಲಾಗಿದೆ. ದೇಶದ ಪ್ರಜೆಗೆ ಪ್ರಭುವಿನ ಪಟ್ಟ ಇದೆ. ಪ್ರಜೆಗಳನ್ನು ಅಧಿಕಾರಸ್ಥರನ್ನಾಗಿ ಮಾಡಲಾಗುತ್ತಿದ್ದು, ತ್ವರಿತಗತಿಯಲ್ಲಿ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದೆ' ಎಂದು ಹೇಳಿದರು.
‘ಗದಗ ನಗರದಲ್ಲಿ ಈ ಕಲ್ಪನೆ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಹಿಂದೆ ಅರಸರ ಕಾಲದಲ್ಲಿ ನಾಗರಿಕರಿಗೆ ತೊಂದರೆ ಆದಾಗ ನ್ಯಾಯದ ಗಂಟೆಯನ್ನು ಬಾರಿಸಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದ್ದು ತಂತ್ರಜ್ಞಾನಕ್ಕೆ ತಕ್ಕಂತೆ ಬಟನ್ ಒತ್ತುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಬಟನ್ ಒತ್ತಿದಾಕ್ಷಣ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ನವರು ಮಾಹಿತಿ ಪಡೆಯುತ್ತಾರೆ. ಜನರ ದೂರು ಆಲಿಸಿ ತಕ್ಷಣ ಸಂಬಂಧಿಸಿದವರಿಗೆ ಕಳುಹಿಸಿಕೊಡುತ್ತಾರೆ. ಇದರಿಂದ ಕೆಲವೇ ಗಂಟೆಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಹಿರಿಯ ನಾಗರಿಕರ ರಕ್ಷಣೆ, ಮದ್ಯ ಅಕ್ರಮ ಮಾರಾಟ, ರಸ್ತೆ ಸುರಕ್ಷತಾ ಕ್ರಮ, ಸಮಾಜದ್ರೋಹಿ ಚಟುವಟಿಕೆ, ಅನುಮಾನಾಸ್ಪದ ವಸ್ತುಗಳು, ಜಮೀನು ಹಕ್ಕುಗಳ ಪ್ರಕರಣ, ಪಿಂಚಣಿ ಸಂಬಂಧಿಸಿದ ಪ್ರಕರಣ, ಪಂಚಾಯಿತಿ ಸೇವೆಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಅಧಿಕಾರಿಗಳಾದ ಎ.ಎ.ಕಂಬಾಳಿಮಠ, ರಾಜಾರಾಮ್ ಪವಾರ, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಪ್ರಭು ಬುರಬುರೆ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.