ಲಕ್ಷ್ಮೇಶ್ವರ: ತಾಲ್ಲೂಕಿನಾದ್ಯಂತ ಗಣೇಶನ ಹಬ್ಬದ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶನಿವಾರ ವಿಘ್ನವಿನಾಶಕ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.
ಲಕ್ಷ್ಮೇಶ್ವರದಲ್ಲಿ 56 ಕಡೆ ಸೇರಿದಂತೆ ತಾಲ್ಲೂಕಿನಾದ್ಯಂತ ಒಟ್ಟು 185 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ದೊಡ್ಡ ಪೆಂಡಾಲ್‍ಗಳು ನಿರ್ಮಾಣಗೊಂಡಿವೆ. ಅಲ್ಲದೆ, ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಭರದ ಸಿದ್ಧತೆಗಳು ಸಾಗಿವೆ.
ಬೆಲೆ ಏರಿಕೆ ಬಿಸಿ: ಈ ವರ್ಷ ಎರಡು ತಿಂಗಳವರೆಗೆ ನಿರಂತರವಾಗಿ ಸುರಿದ ಮಳೆ ಹೂ ಬೆಳೆ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದಾಗಿ ಹೂವಿನ ಇಳುವರಿ ಕುಂಠಿತಗೊಂಡಿದ್ದು, ಎಲ್ಲ ತರದ ಹೂವುಗಳ ಬೆಲೆ ಗಗನಕ್ಕೇರಿವೆ.
ಗಣಪನ ಎದುರು ಇಡಲು ಐದು ತರದ ಹಣ್ಣುಗಳು ಬೇಕು. ಈ ಬಾರಿ ಹಣ್ಣುಗಳ ದರವೂ ಏರಿಕೆಯಾಗಿದೆ. ಐದು ತರದ ಹಣ್ಣುಗಳ ಸೆಟ್ ಬರೋಬ್ಬರಿ ₹150ರಿಂದ ₹200ಕ್ಕೆ ಮಾರಾಟವಾಗುತ್ತಿವೆ. ಅದರೊಂದಿಗೆ ಗಣೇಶನ ಮೂರ್ತಿಗಳ ಬೆಲೆಯೂ ಹೆಚ್ಚಿದೆ. ಸಣ್ಣ ಗಾತ್ರದ ಗಣೇಶ ಮೂರ್ತಿಗಳು ₹400ರಿಂದ ₹800ರವರೆಗೆ ಮಾರಾಟವಾಗುತ್ತಿವೆ.
ಶುಕ್ರವಾರ ಹಬ್ಬಕ್ಕಾಗಿ ಬೇಕಾದ ವಸ್ತುಗಳ ಖರೀದಿ ಜೋರಾಗಿ ನಡೆಯಿತು. ಬಾಳೆ ದಿಂಡು, ಐದು ತರದ ಹಣ್ಣು, ಹೂವು ಮತ್ತು ಅಲಂಕಾರಿಕ ವಸ್ತುಗಳನ್ನು ಜನರು ಖರೀದಿಸಿದರು.
ಪ್ರತಿ ವರ್ಷ ಗಣೇಶ ಹಬ್ಬ ಡಿ.ಜೆ ಬಳಸಲಾಗುತ್ತಿತ್ತು. ಆದರೆ ಈ ಬಾರಿ ಡಿ.ಜೆ ಬಳಕೆಯನ್ನು ಜಿಲ್ಲಾಡಳಿತ ನಿಷೇಧ ಮಾಡಿದೆ. ಡಿ.ಜೆ ಬಳಸಿದರೆ ಕಾನೂನು ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.