ADVERTISEMENT

ಬೆಳೆಹಾನಿ ವರದಿ ಶೀಘ್ರ ಸರ್ಕಾರಕ್ಕೆ ಸಲ್ಲಿಕೆ

₹137.05 ಕೋಟಿ ಪರಿಹಾರ ಕೋರಿ ಪ್ರಸ್ತಾವ ಸಿದ್ಧ: ಸಚಿವ ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:12 IST
Last Updated 30 ಸೆಪ್ಟೆಂಬರ್ 2025, 6:12 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿರುವ ಬೆಳೆಹಾನಿ ಕುರಿತು ನಡೆಸಿದ ಜಂಟಿ ಸಮೀಕ್ಷೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 1,12,438 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ಪ್ರಕಾರ ₹121.33 ಕೋಟಿ ಪರಿಹಾರ ಕೋರಿ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಎಚ್.ಕೆ. ಪಾಟೀಲ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ 11,348 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್ ಪ್ರಕಾರ ₹10.36 ಕೋಟಿ ಪರಿಹಾರಕ್ಕಾಗಿ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಕೃಷಿ ಬೆಳೆ ಹಾನಿಗೆ ಸಂಬಂಧಿಸಿದಂತೆ 4,337 ರೈತರಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಿ ವರದಿಯಲ್ಲಿ ಅಳವಡಿಸಲಾಗುವುದು. ಕೃಷಿಗೆ ಸಂಬಂಧಿಸಿದಂತೆ ₹4.36 ಕೋಟಿ ಹಾಗೂ ತೋಟಗಾರಿಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ₹1 ಕೋಟಿ ಪರಿಹಾರ ನೀಡಲು ಪ್ರಸ್ತಾವನೆಯಲ್ಲಿ ಸೇರಿಸಿ, ಸಲ್ಲಿಸಲಾಗುವುದು’ ಎಂದು ತಿಳಿಸಿದರು. 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಇದ್ದರು.

ADVERTISEMENT

- ಜನತಾ ದರ್ಶನ: ಅರ್ಜಿ ವಿಲೇವಾರಿಗೆ ಸೂಚನೆ

ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಜನತಾ ದರ್ಶನ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಸಲಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮವಹಿಸಲಾಗಿದೆ. ಜನತಾ ದರ್ಶನದಲ್ಲಿ ಕೆಲವೊಂದು ಅರ್ಜಿಗಳು ಅನುದಾನದ ಲಭ್ಯತೆ ಇಲ್ಲದೇ ವಿಲೇವಾರಿಯಾಗಿಲ್ಲ. ಸಂಬಂಧಿತ ಇಲಾಖೆ ಅಧಿಕಾರಿಗಳು ಮೇಲಾಧಿಕಾರಿಗಳೊಂದಿಗೆ ಸಂಪರ್ಕಿಸಿ ಅನುದಾನ ತರಿಸಿಕೊಂಡು ಅರ್ಜಿ ವಿಲೇವಾರಿಗೆ ಕ್ರಮ ವಹಿಸಬೇಕು ಎಂದರು. ಇನ್ನು ಕೆಲವು ಅರ್ಜಿಗಳ ವಿಲೇವಾರಿಗಾಗಿ ಆಯ್ಕೆ ಸಮಿತಿ ಸಭೆಗಳನ್ನು ಮಾಡಬೇಕಾಗಿದೆ. ಹೀಗೆ ವಿವಿಧ ಹಂತದಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಇಲಾಖೆ ಅಧಿಕಾರಿಗಳು ಅಕ್ಟೋಬರ್ 10ರ ಒಳಗಾಗಿ ವಿಲೇವಾರಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.