ADVERTISEMENT

ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆ ಬಿಜೆಪಿ ಮಾತನಾಡಲಿ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 15:10 IST
Last Updated 6 ಮಾರ್ಚ್ 2024, 15:10 IST
 ಪ್ರಿಯಾಂಕ್ ಖರ್ಗೆ
 ಪ್ರಿಯಾಂಕ್ ಖರ್ಗೆ   

ಗದಗ: ‘ಬಿಜೆಪಿಗೆ ನೈತಿಕತೆ ಇದ್ದರೆ ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆ ಮಾತನಾಡಲಿ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರ ಟೀಕೆಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಕುಕ್ಕರ್‌ ಬಾಂಬ್ ಸ್ಫೋಟಿಸಿದ ವ್ಯಕ್ತಿ ತರಬೇತಿ ಪಡೆದಿದ್ದು ತೀರ್ಥಹಳ್ಳಿಯಲ್ಲಿ. ಅದು ಆಗಿನ ಗೃಹ ಸಚಿವರ ಕ್ಷೇತ್ರ. ತೀರ್ಥಹಳ್ಳಿಯಲ್ಲಿ ತರಬೇತಿ ಪಡೆದು, ಆರ್‌ಎಸ್‌ಎಸ್‌ ಪ್ರಯೋಗಾಲಯವಾದ ಮಂಗಳೂರಿನಲ್ಲಿ ಆತ ಸ್ಫೋಟಿಸಿದ. ಆಗಿನ ಸಚಿವರು ರಾಜೀನಾಮೆ ಕೊಟ್ಟಿದ್ದರಾ’ ಎಂದು ಪ್ರಶ್ನಿಸಿದರು.

‘ಮಂಡ್ಯದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ ಘಟನೆಯನ್ನು ಬಿಜೆಪಿಯವರು ಮುಚ್ಚಿ ಹಾಕಿದ್ದು ಏಕೆ? ಸಂಸತ್‌ಗೆ ನುಗ್ಗಿದ ಪ್ರಕರಣದಲ್ಲಿ ಸಂಸದ ಪ್ರತಾಪ್‌ ಸಿಂಹ ಆರೋಪಿಗಳಿಗೆ ಪಾಸ್‌ ಕೊಟ್ಟಿದ್ದನ್ನು ಯಾಕೆ ಚರ್ಚಿಸುತ್ತಿಲ್ಲ’ ಎಂದರು.

ADVERTISEMENT

‘ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್‌ ವರದಿ ಬಂದಿದೆ. ಘೋಷಣೆ ಕೂಗಿರಬಹುದೆಂದು ವರದಿ ಹೇಳಿದೆ. ಇನ್ನೂ ತನಿಖಾ ಹಂತದಲ್ಲಿದೆ. ಧ್ವನಿ ಇಂಥವರದ್ದೇ ಎಂದು ಎಲ್ಲೂ ಹೇಳಿಲ್ಲ. ಧ್ವನಿ ಮಾದರಿ ಹೊಂದಾಣಿಕೆಯಾದರೆ, ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ಸರ್ಕಾರಿ ವರದಿ ಅಂತಿಮವೇ ಹೊರತು ಆರ್‌ಎಸ್‌ಎಸ್‌ ವರದಿ ಒಪ್ಪಲ್ಲ’ ಎಂದು ಅವರು ತಿಳಿಸಿದರು.

ಪ್ರಿಯಾಂಕ್‌ ಖರ್ಗೆ ವಿರುದ್ಧ ನಡೆದಿರುವ ‘ಗುಲಾಮ್‌ ಗ್ಯಾಂಗ್‌’ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರಿಗೆ ನಾನು ಮನೆ ದೇವರು ಇದ್ದಂತೆ. ನನ್ನ ಹೆಸರು ಹೇಳದಿದ್ದರೆ, ಅವರಿಗೆ ನಿದ್ದೆ ಬರಲ್ಲ. ಅವರ ಮನೆಯಲ್ಲಿ ಬಾಗಿಲು ತೆಗೆಯುವುದಿಲ್ಲ. ತಿಂದಿದ್ದು ಜೀರ್ಣ ಆಗಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.