
ಗಜೇಂದ್ರಗಡ: ‘ಜಗತ್ತಿಗೆ ಪ್ರವಾದಿ ಮಹ್ಮದರ ಕೊಡುಗೆ ದೊಡ್ಡದು. ಜಗತ್ತು ಶಾಂತಿ ಹಾಗೂ ಸೌಹಾರ್ದತೆಯಿಂದ ಸಾಗಬೇಕಾದರೆ ನಾವೆಲ್ಲರೂ ಒಂದಾಗಿ ಬಾಳಬೇಕಿದೆ’ ಎಂದು ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಜನತಾ ಪ್ಲಾಟ್‌ನಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯಿಂದ ಶುಕ್ರವಾರ ನಡೆದ ಹಜರತ್ ಮುಕ್ಷಾವಲಿ ದರ್ಗಾ ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಾತಿ ಎಂಬುದು ವಿಷ, ಧರ್ಮ ಎಂಬುದು ಅಮೃತವಾಗಿದೆ. ಪ್ರಾರ್ಥನಾ ಸ್ಥಳಗಳು ಬದುಕನ್ನು ನೆಮ್ಮದಿಯಡೆಗೆ ಕೊಂಡೊಯ್ಯುವ ಪವಿತ್ರ ಸ್ಥಳಗಳಾಗಿದ್ದು, ಕೂಡಿ ಬಾಳುವುದು ಪ್ರವಾದಿಗಳು, ಸಂತರುಗಳ ಆಶಯವಾಗಿದೆ. ದೇಶದ ಅಸ್ಮಿತೆಯಾದ ಸೌಹಾರ್ದತೆ, ಭಾವೈಕ್ಯ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ’ ಎಂದರು.
ಟಕ್ಕೇದ ದರ್ಗಾದ ಹಜರತ್ ನಿಜಾಮುದ್ದೀನಶಾ ಅಶ್ರಫಿ ಮಾತನಾಡಿ, ‘ನಮಾಜ್ ನಮ್ಮ ತಪ್ಪುಗಳಿಗೆ ಕ್ಷಮೆ ಕೇಳುವ ಹಾಗೂ ಉತ್ತಮ ಹಾದಿಯಲ್ಲಿ ಬದುಕು ಕಟ್ಟಿಕೊಳ್ಳುವ ಮಾರ್ಗವಾಗಿದೆ. ಗಜೇಂದ್ರಗಡದ ಸೌಹಾರ್ದಕ್ಕೆ ಘೋರ್ಪಡೆ ರಾಜ ಮನೆತನದ ಕೊಡುಗೆ ಅನನ್ಯವಾಗಿದೆ’ ಎಂದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ‘ನಮ್ಮ ದೇಶ ವಿವಿಧ ಜಾತಿ, ಧರ್ಮಗಳ ಜನರಿಗೆ ನೆಮ್ಮದಿಯ ಜೀವನ ಕಟ್ಟಿಕೊಂಡಿರುವ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಸರ್ವರಿಗೂ ಸುಖ, ಶಾಂತಿ, ನೆಮ್ಮದಿಯಿಂದ ಬದುಕು ನಡೆಸಲಿ ಎಂಬುದು ನನ್ನ ಪ್ರಾರ್ಥನೆ’ ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನ ತಟಗಾರ ಮಾತನಾಡಿದರು. ಸೈಯದ್ ಅಹ್ಮದ ರಾಜಾ ಸಾನ್ನಿಧ್ಯ ವಹಿಸಿದ್ದರು. ಮೌಲಾನಾಗಳಾದ ಮಹ್ಮದ ಫಾರೂಖ, ಯಾಸೀನ್ ಆಶ್ರಫಿ, ರಫೀಕ ಹಾಳಗಿ, ಮುಖಂಡರಾದ ಯೂಸೂಫ್ ಇಟಗಿ, ಶಿವರಾಜ ಘೋರ್ಪಡೆ, ಮುರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ಸುಭಾನಸಾಬ ಆರಗಿದ್ದಿ ಎ.ಡಿ. ಕೋಲಕಾರ, ಚಂಬಣ್ಣ ಚವಡಿ, ಶ್ರೀಕಾಂತ ಅವಧೂತ, ಅಪ್ಪು ಮತ್ತಿಕಟ್ಟಿ, ಬಸವರಾಜ ಬಂಕದ, ಶ್ರೀಧರ ಬಿದರಳ್ಳಿ, ಯಲ್ಲಪ್ಪ ಬಂಕದ, ಭಾಷೇಸಾಬ ಮುದಗಲ್, ಫಯಾಜ್ ತೋಟದ, ಈಶಪ್ಪ ರಾಠೋಡ ಇದ್ದರು.