ಗಜೇಂದ್ರಗಡ: ಶೇಂಗಾ ಬೆಲೆ ಕುಸಿತ, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಸ್ಥಾಪನೆ ಆಗದಿರುವುದು ಹಾಗೂ ಮಾರುಕಟ್ಟೆಯಲ್ಲಿನ ನ್ಯೂನ್ಯತೆಗಳನ್ನು ಖಂಡಿಸಿ ವಿವಿಧ ಗ್ರಾಮಗಳ ರೈತರು ಶುಕ್ರವಾರ ಎಪಿಎಂಸಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ʼಗಜೇಂದ್ರಗಡ ಎಪಿಎಂಸಿಗೆ ಕಳೆದೊಂದು ತಿಂಗಳಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆದಿರುವ ಶೇಂಗಾ ಫಸಲು ಬರುತ್ತಿದೆ. ಈಗಾಗಲೇ ಶೇಂಗಾ ಬೆಳೆಗೆ ಚುಕ್ಕಿ ರೋಗಕ್ಕೆ ತುತ್ತಾಗಿ ಇಳುವರಿ ಕುಂಠಿತವಾಗಿದೆ. ಇದರ ನಡುವೆ ಶೇಂಗಾ ಬೆಲೆ ಪ್ರತಿ ಕ್ವಿಂಟಲ್‌ಗೆ ₹1,200 ರಿಂದ ₹1,500 ಕಡಿಮೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಲ ಮಾಡಿ ದುಬಾರಿ ಬೆಲೆಯ ಬೀಜ ಖರಿದಿಸಿ ಬಿತ್ತನೆ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.
‘ರೈತರು ತಮ್ಮ ಫಸಲನ್ನು ಎಪಿಎಂಸಿಯಲ್ಲಿ ತೀರಾ ಕನಿಷ್ಠ ಬೆಲೆಗೆ ಮಾರಾಟ ಮಾಡಿದ ಮೇಲೆ ಸರ್ಕಾರ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರ ತೆರೆಯುತ್ತದೆ. ರೈತರಿಂದ ಖರೀದಿಸಿ ಕೂಡಿಟ್ಟ ಫಸಲನ್ನು ದಲ್ಲಾಳಿಗಳು ರೈತರ ಹೆಸರಿನಲ್ಲಿ ಮಾರಾಟ ಮಾಡಿ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಾರೆʼ ಎಂದು ಹರಿಹಾಯ್ದರು.
ʼಎಪಿಎಂಸಿಯಲ್ಲಿ 2 ಗಂಟೆ ಒಳಗೆ ಟೆಂಡರ್ ಹಾಕಬೇಕು. ಹಮಾಲರಿಗೆ ಸ್ಯಾಂಪಲ್ ಬಿಡಬಾರದು, ಕಚೇರಿಯಲ್ಲಿ ರೈತರಿಗೆ ದರದ ಮಾಹಿತಿ ನೀಡುವ ಸ್ಕ್ರೀನ್ ಅಳವಡಿಸಬೇಕು. ಶ್ರೀಘ್ರದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಸಕಾಲದಲ್ಲಿ ಬಿತ್ತನೆ ಬೀಜ ಪೂರೈಕೆಗೆ ಕ್ರಮ ಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಕಾರ್ಯದರ್ಶಿ ಧನರಾಜ ಪಟ್ಟಣಶೆಟ್ಟಿ ರೈತರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ʼಗಜೇಂದ್ರಗಡದ ಎಪಿಎಂಸಿಯ 8 ಜನ ಖರೀದಿದಾರರ ಮೂಲಕ ಕೊಪ್ಪಳ, ಇಳಕಲ್, ಗಂಗಾವತಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಕಡೆಗಳಿಂದ ಖರೀದಿದಾರರು ಬರುತ್ತಿದ್ದಾರೆ. ಒಂದು ವಾರ ಕಾಲಾವಕಾಶ ನೀಡಿ ಗಜೇಂದ್ರಗಡ ಎಪಿಎಂಸಿಗೆ ಖರೀದಿಗೆ ಬರುವಂತೆ ಸುತ್ತಮುತ್ತಲಿನ ಖರೀದಿದಾರರ ಸಂಘಗಳಿಗೆ ಪತ್ರ ಬರೆಯುವುದರ ಜೊತೆಗೆ ಬೆಲೆ ಏರಿಕೆಗೆ ಏನೇನು ಕ್ರಮ ಕೈಗೊಳ್ಳಬೇಕು ಅದೆಲ್ಲವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆʼ ಎಂದು ಭರವಸೆ ನೀಡಿದರು.
ಬಳಿಕ ರೈತರು ಎಪಿಎಂಸಿ ಕಾರ್ಯದರ್ಶಿ ಧನರಾಜ ಪಟ್ಟಣಶೆಟ್ಟಿ ಹಾಗೂ ಬೆಂಬಲ ಬೆಲೆಯಲ್ಲಿ ಖರಿದಿ ಕೇಂದ್ರ ತೆರೆಯುವಂತೆ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಪರಶುರಾಮ ಶಿಂಗ್ರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಳಕಪ್ಪ ಹೂಗಾರ, ಮಂಜುನಾಥ ರಾಠೋಡ, ಸದಾನಂದ ಬಾಂಡಗೆ, ಮುತ್ತಪ್ಪ ಹಾದಿಮನಿ, ಶಿವು ರಾಠೋಡ, ಪರಶುರಾಮ ಮಾಳೋತ್ತರ, ಯಲ್ಲಪ್ಪ ಶಂಕ್ರಿ, ಸುರೇಶ ಕಲಾಲ, ಪರಸಪ್ಪ ರಾಠೋಡ, ಬಸಣ್ಣ ಹೊಗರಿ, ಪ್ರಶಾಂತ ಹೂಗಾರ, ಬಸವರಾಜ ಆಡಿನ, ಪರಶುರಾಮ ಚಿಲಝರಿ, ನೀಲಪ್ಪ ಕೆಂಪನಾಳ, ಶರಣಪ್ಪ ಚಿಲಝರಿ, ಮಲ್ಲಪ್ಪ ಗುಳಗುಳಿ, ಬೈಲಪ್ಪ ಗುಳಗುಳಿ, ಮುದಿಯಪ್ಪ ಗುಳಗುಳಿ, ಸಿದ್ದಪ್ಪ ಕೊಪ್ಪದ, ಭೀಮಪ್ಪ ತಳವಾರ ಸೇರಿದಂತೆ ಇತರರು ಇದ್ದರು.
ಸಂಕಷ್ಟಕ್ಕೆ ಸಿಲುಕಿರುವ ಶೇಂಗಾ ಬೆಳೆಗಾರರು ಬೆಂಬಲ ಬೆಲೆ ಖರೀದಿ ಕೇಂದ್ರ ಶೀಘ್ರ ಆರಂಭಿಸಿ ರೈತ ಸಂಪರ್ಕ ಕೇಂದ್ರದಲ್ಲಿ ಸಕಾಲದಲ್ಲಿ ಬಿತ್ತನೆಬೀಜ ಒದಗಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.