ADVERTISEMENT

ಅಸಮಾನತೆ ಎತ್ತಿಹಿಡಿವ ಮನುಸ್ಮೃತಿ ದಹಿಸಿದ ಅಂಬೇಡ್ಕರ್‌

ದಲಿತ ಸಂಘಟನೆಗಳ ಒಕ್ಕೂಟ: ಮನುಸ್ಮೃತಿ ದಹನ್‌ ದಿವಸ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 4:30 IST
Last Updated 26 ಡಿಸೆಂಬರ್ 2025, 4:30 IST
ಗದಗ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಗಾಂಧಿ ವೃತ್ತದಲ್ಲಿ ಮನುಸ್ಮೃತಿ ದಹನ್‌ ದಿವಸ್‌ ಆಚರಿಸಲಾಯಿತು
ಗದಗ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಗಾಂಧಿ ವೃತ್ತದಲ್ಲಿ ಮನುಸ್ಮೃತಿ ದಹನ್‌ ದಿವಸ್‌ ಆಚರಿಸಲಾಯಿತು   

ಗದಗ: ‘ಮಹಿಳೆಯರ ಘನತೆ ಹಾಗೂ ಸಮಾಜದ ಎಲ್ಲ ಮನುಷ್ಯರ ಗೌರವ ಹಾಗೂ ಸಮಾನತೆ ಎತ್ತಿ ಹಿಡಿಯುವುದರ ಸಂಕೇತವಾಗಿ ಡಾ. ಬಿ.ಆರ್‌.ಅಂಬೇಡ್ಕರ್‌ ಮನುಸ್ಮೃತಿ ಸುಟ್ಟರು’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.

1927ರ ಡಿ.25ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಮನುಸ್ಮೃತಿ ದಹಿಸಿದ ದಿನದ ಸ್ಮರಣಾರ್ಥ ದಲಿತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಗುರುವಾರ ನಗರದ ಗಾಂಧಿ ವೃತ್ತದಲ್ಲಿ ಸಾಂಕೇತಿಕವಾಗಿ ಮನುಸ್ಮೃತಿ ದಹನ ಮಾಡಿ ಮಾತನಾಡಿದರು.

‘ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ಮನುಸ್ಮೃತಿಯನ್ನು ಸುಟ್ಟಿದ್ದು ಒಂದು ರೂಪಕವಷ್ಟೇ. ನಿಜವಾಗಿ ಅವರು ದಹನ ಮಾಡಿದ್ದು, ಈ ದೇಶದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆಯನ್ನು’ ಎಂದು ವಿಶ್ಲೇಷಿಸಿದರು.

ADVERTISEMENT

‘ಹಿಂದಿನ ಭಾರತದಲ್ಲಿ ಬ್ರಾಹ್ಮಣರು ಮಾತ್ರ ಶ್ರೇಷ್ಠ; ಉಳಿದವರು ಕನಿಷ್ಠ ಎಂಬ ಮನಸ್ಥಿತಿ ಇತ್ತು. ಆಗ ಮನುಷ್ಯನನ್ನು ಮನುಷ್ಯನಂತೆ ಕಾಣುತ್ತಿರಲಿಲ್ಲ. ಎಲ್ಲರನ್ನೂ ಜಾತಿಯಿಂದ ನೋಡಲಾಗುತ್ತಿತ್ತು. ಹೆಣ್ಣು ಕೂಡ ಒಂದು ಜೀವ, ಅವಳಿಗೂ ಘನತೆ ಇದೆ ಎಂದು ನೋಡದ ದೇಶ ಇದಾಗಿತ್ತು. ಇಂತಹ ಅಸಮಾನತೆ ಎತ್ತಿಹಿಡಿಯುವ ಮನುಸ್ಮೃತಿಯನ್ನು ಸುಡುವ ಮೂಲಕ ಡಾ. ಬಿ.ಆರ್‌.ಅಂಬೇಡ್ಕರ್‌ ಬಹಿರಂಗ ವಿರೋಧ ಮಾಡಿದರು’ ಎಂದು ಹೇಳಿದರು.

ದಲಿತ ಮುಖಂಡರಾದ ಎಸ್‌.ಎನ್‌.ಬಳ್ಳಾರಿ, ಮುತ್ತು ಬಿಳೆಯಲಿ, ಶರೀಫ ಬಿಳೆಯಲಿ ಮಾತನಾಡಿದರು.

ನೂರಾರು ಮಂದಿ ಮಹಿಳೆಯರು ‘ಮನುಸ್ಮೃತಿ ಅಳಿಯಲಿ; ಸಂವಿಧಾನ ಉಳಿಯಲಿ’ ಎಂದು ಘೋಷಣೆ ಕೂಗುತ್ತ ಸಾಂಕೇತಿಕವಾಗಿ ಮನುಸ್ಮೃತಿ ದಹಿಸಿದರು.