ಮುಂಡರಗಿ: ‘ಮಹಿಳಾ ಸಮುದಾಯ ಶೌಚಾಲಯಗಳ ದುರಸ್ತಿ ಸೇರಿದಂತೆ ಸಾರ್ವಜನಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಅ.6ರಂದು ಪುರಸಭೆ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದು ವಿಶ್ವ ಕನ್ನಡ ರಕ್ಷಣಾ ವೇದಿಕೆಯ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಧುಮತಿ ಮಡಿವಾಳರ ಎಚ್ಚರಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೌಚಾಲಯಗಳನ್ನು ನಿರ್ವಹಿಸುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.
‘ಪಟ್ಟಣದ 11ನೇ ವಾರ್ಡ್‌ನಲ್ಲಿ ಸುಸಜ್ಜಿತವಾದ ಸಮುದಾಯ ಮಹಿಳಾ ಶೌಚಾಲಯವನ್ನು 2023ರಲ್ಲಿ ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಶೌಚಾಲಯ ನಾಶ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ದುಷ್ಕರ್ಮಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ’ ಎಂದು ದೂರಿದರು.
‘ಅಲ್ಲಿದ್ದ ಮಹಿಳಾ ಶೌಚಾಲಯವನ್ನು ನಾಶ ಮಾಡಿರುವುದರಿಂದ ಅಕ್ಕಪಕ್ಕದ ವಾರ್ಡುಗಳ ನೂರಾರು ಮಹಿಳೆಯರು ಬಹಿರ್ದೆಸೆಗಾಗಿ ಬಯಲಿಗೆ ತೆರಳಬೇಕಿದೆ. ತಕ್ಷಣ ಅಲ್ಲಿ ಶೌಚಾಲಯ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.
‘ಪಟ್ಟಣದ ಬಡ ಕುಟುಂಬಗಳು ಹಲವು ವರ್ಷಗಳಿಂದ ಆಶ್ರಯ ಮನೆಗಳಿಲ್ಲದೆ ಬೀದಿಯಲ್ಲಿ ಜೀವನ ನಿರ್ವಹಿಸಬೇಕಾಗಿದೆ. ಪುರಸಭೆಯವರು ತಕ್ಷಣ ಅವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕು’ ಎಂದೂ ಮನವಿ ಮಾಡಿದರು.
‘ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಕಳಪೆಯಾಗಿದ್ದು, ತನಿಖೆ ನಡೆಸಬೇಕು. ಪುರಸಭೆ ವ್ಯಾಪ್ತಿಯ ಅಂಬೇಡ್ಕರ್ ನಗರ ಹಾಗೂ ಶಿರೂಳ ಗ್ರಾಮಗಳಲ್ಲಿ ದಲಿತರು ವಾಸಿಸುತ್ತಿರುವ ಮನೆಗಳಿಗೆ ಉತಾರ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಭಾಷುಸಾಬ್ ಡಂಬಳ, ರಾಜಾಭಕ್ಷಿ ದಂಡಿನ, ಮಾಬುಸಾಬ್ ಶಾಬಾದಿ, ಗೀತಾ ಗೌಡ್ರ, ಸಬಿನಾ ಲಕ್ಷ್ಮೇಶ್ವರ, ರೇಣುಕಾ ಡೊಳ್ಳಿನ, ಇಸ್ಮಾಯಿಲ್ ಮುಲ್ಲಾ, ಅಲ್ಲಾಭಕ್ಷಿ ಅಳವುಂಡಿ, ಶಂಸುದ್ದೀನ ಹಾರೋಗೇರಿ, ಬಾಷಾಸಾಬ್, ಶಿವಾಜಿ ಮಡಿವಾಳರ, ರಿಯಾಜ ಬಾಗಲಿ, ದುರುಗಪ್ಪ ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.