
ಗದಗ: ‘ಶಾಲಾಶಿಕ್ಷಣ ಇಲಾಖೆಯು (ಪದವಿಪೂರ್ವ) ಇತ್ತೀಚೆಗೆ ಕಾಲೇಜುಗಳಿಗೆ ಪೂರಕವಲ್ಲದ ಆದೇಶಗಳನ್ನು ಹೊರಡಿಸುತ್ತಿದ್ದು, ಇದರಿಂದ ದೈನಂದಿನ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಜತೆಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಆತ್ಮಸ್ಥೆರ್ಯ ಕುಗ್ಗಿಸುತ್ತಿವೆ’ ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ (ಪದವಿಪೂರ್ವ) ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸುರೇಶರಡ್ಡಿ ಸೋಮಣ್ಣವರ ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯು ಅವೈಜ್ಞಾನಿಕವಾಗಿ ಹೊರಡಿಸಿರುವ ಮತ್ತು ಹೊರಡಿಸುತ್ತಿರುವ ಆದೇಶಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.
‘ಪರೀಕ್ಷಾ ಮಂಡಳಿಯನ್ನು ಪದವಿಪೂರ್ವ ಇಲಾಖೆಯಿಂದ ಪ್ರತ್ಯೇಕಿಸಿದ ನಂತರ ದೇಶದಲ್ಲಿ ಮಾದರಿಯಾಗಿದ್ದ ಪದವಿಪೂರ್ವ ಶಿಕ್ಷಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಪದವಿಪೂರ್ವ ಶಿಕ್ಷಣಕ್ಕೆ ಸಂಬಂಧನೇ ಇಲ್ಲದ ಡಯಟ್‍ನ ಪ್ರಶಿಕ್ಷಣಾರ್ಥಿಗಳನ್ನು ಪದವಿಪೂರ್ವ ಕಾಲೇಜುಗಳ ಸ್ಥಿತಿಗತಿಗಳ ದತ್ತಾಂಶ ಕ್ರೋಡೀಕರಿಸುವ ನೆಪದಲ್ಲಿ ಕಾಲೇಜುಗಳನ್ನು ಪರಿಶೀಲನೆಗೊಳಪಡಿಸಲು ಹೊರಟಿರುವುದು ಪದವಿಪೂರ್ವ ಶಿಕ್ಷಣದ ದುರಂತವೇ ಸರಿ’ ಎಂದು ಆತಂಕ ವ್ಯಕ್ತಪಡಿಸಿದರು.
‘ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಅಸ್ಥಿರಗೊಳ್ಳದಂತೆ ನೋಡಿಕೊಳ್ಳುವುದೇ ನಮ್ಮ ಧ್ಯೇಯವಾಗಿದೆ. ಆದ್ದರಿಂದ ಸಂಘದ ಬೇಡಿಕೆಗಳಾದ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಹಾಗೂ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ ಸಂಬಂಧಿಸಿದಂತೆ 18.10.2025 ಮತ್ತು 31.10.2025ರಂದು ಹೊರಡಿಸಿದ ಜಂಟಿ ಸುತ್ತೋಲೆಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘2024-25ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಹಾಗೂ ಸಂಭಾವನೆ ಬಾಕಿ ಇರುವ ₹13.5 ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆ ಮತ್ತು ಪ್ರಾಂಶುಪಾಲರ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಬೇಕು. ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕೇತರ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. ಉಪನಿರ್ದೇಶಕರ ಕಚೇರಿಯನ್ನು ಬಲವರ್ಧನೆಗೊಳಿಸಲು ಇಬ್ಬರು ಹಿರಿಯ ಪ್ರಾಂಶುಪಾಲರನ್ನು ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ನಿಯೋಜಿಸಿ ಆ ಮುಖಾಂತರ ಇಲಾಖೆಯ ಪರೀಕ್ಷೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸಬೇಕು’ ಎಂದು ಆಗ್ರಹಿಸಿದರು.
ಗದಗ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಗದಗ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಗದಗ ಶಾಖೆಯ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.