
ಲಕ್ಷ್ಮೇಶ್ವರ: ಅದೀಗ ತಾನೇ ಸೂರ್ಯದೇವ ಪೂರ್ವ ದಿಗಂತದಲ್ಲಿ ಹೊಂಬಣ್ಣದ ಕಿರಣಗಳನ್ನು ಭುವಿಗೆ ಚೆಲ್ಲುತ್ತ ಉದಯಿಸುತ್ತಿದ್ದ ಸಮಯ. ನೀಲಾಕಾಶದಲ್ಲಿ ಪಕ್ಷಿಗಳ ಹಾರಾಟ, ತಣ್ಣನೆ ಬೀಸುತ್ತಿದ್ದ ತಂಗಾಳಿಯಲ್ಲಿ ಅಲೆ ಅಲೆಯಾಗಿ ತೇಲಿ ಬರುತ್ತಿದ್ದ ಸಿತಾರ್ ವಾದನಕ್ಕೆ ಸಂಗೀತ ರಸಿಕರು ತಲೆದೂಗುತ್ತಿದ್ದರು.
ಹೌದು... ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಶುಕ್ರವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಆರಂಭಗೊಂಡ ಪುಲಿಗೆರೆ ಉತ್ಸವದ ಮೊದಲನೇ ದಿನದ ಉದಯರಾಗ ಕಾರ್ಯಕ್ರಮದಲ್ಲಿ.
ಇನ್ಫೋಸಿಸ್ ಫೌಂಡೇಷನ್ ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಹಾಗೂ ಲಕ್ಷ್ಮೇಶ್ವರ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಸಹಯೋಗದಲ್ಲಿ 9ನೇ ವರ್ಷದ ಪುಲಿಗೆರೆ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಬೆಳಗಿನ ಒಂದನೇ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ಕಲಾವಿದೆ ಮುಕ್ತಾ ಕುಲಕರ್ಣಿ ಅವರು ಸಿತಾರ್ ವಾದನ ನುಡಿಸಿ ಜನಮನ ಗೆದ್ದರು. ಥೋಡಿ ರಾಗದಲ್ಲಿ ಕಾರ್ಯಕ್ರಮ ಆರಂಭಿಸಿದ ಅವರು, ಸಿತಾರ್‌ದ ಒಂದೊಂದೇ ತಂತಿಗಳನ್ನು ಮೀಟುವ ಮೂಲಕ ಸ್ವರಗಳನ್ನು ನುಡಿಸಿ ಕಲಾರಸಿಕರ ಮೆಚ್ಚುಗೆ ಪಡೆದರು. ಅವರಿಗೆ ತಬಲಾ ಸಾಥ್ ನೀಡಿದ ಕೃಷ್ಣಕುಮಾರ ಕುಲಕರ್ಣಿ ಅವರ ಕೈ ಚಳಕಕ್ಕೆ ಸಂಗೀತ ಪ್ರಿಯರು ಮತ್ತೊಮ್ಮೆ ಮನಸೋತರು.
ಇನ್ನು ಉದಯರಾಗ ಎರಡನೇ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ರಾಜೇಶ್ವರಿ ಪಾಟೀಲ ಅವರ ಹಿಂದೂಸ್ತಾನಿ ಗಾಯನ ಸಂಗೀತ ಪ್ರಿಯರ ಮನತಣಿಸುವಲ್ಲಿ ಯಶಸ್ವಿ ಆಯಿತು. ರಾಗ ಥೋಡಿಯಲ್ಲಿ ಆಲಾಪ ಶುರು ಮಾಡಿದ ಅವರು ಬಡಾಖ್ಯಾಲ್‍ನಲ್ಲಿ ತಮ್ಮ ಪ್ರತಿಭೆ ಮೆರೆದರು. ಅವರ ಕಂಠದಿಂದ ಹೊರಬರುತ್ತಿದ್ದ ಒಂದೊಂದು ಸ್ವರಕ್ಕೆ ರಸಿಕರು ತಲೆದೂಗಿದರು. ನಂತರ ಕಬೀರ್‍ದಾಸರ ಭಜನೆ ಮತ್ತು ಅಲ್ಲಮಪ್ರಭುಗಳ ವಚನ ಹಾಡಿದರು. ಅವರಿಗೆ ಹರ್ಷಿತಾ ಸೋನಿ ತಬಲಾ ಮತ್ತು ಚಿದಂಬರ ಜೋಶಿ ಹಾಮೋನಿಯಂ ಸಾಥ್ ನೀಡಿದರು.
ಪುಲಿಗೆರೆ ಉತ್ಸವಕ್ಕೆ ಚಾಲನೆ
ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಮೂರು ದಿನಗಳ ವರೆಗೆ ನಡೆಯಲಿರುವ ಪುಲಿಗೆರೆ ಉತ್ಸವ ಶುಕ್ರವಾರದಿಂದ ಆರಂಭಗೊಂಡಿತು.
ಇನ್ಪೋಸಿಸ್ ಪ್ರತಿಷ್ಠಾನ ಭಾರತೀಯ ವಿದ್ಯಾಭವನ ಮತ್ತು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ಪ್ರಾರಂಭವಾದ ಉತ್ಸವಕ್ಕೆ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ. ರಾವ್ ಮತ್ತು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ಸೋಮೇಶ್ವರ ದೇವರಿಗೆ ಪುಷ್ಪಗಳನ್ನು ಸಲ್ಲಿಸಿ ಚಾಲನೆ ನೀಡಿದರು.
ಚಂಬಣ್ಣ ಬಾಳಿಕಾಯಿ ಸಿ.ಆರ್. ಲಕ್ಕುಂಡಿಮಠ ಬಸವೇಶ ಮಹಾಂತಶೆಟ್ಟರ ಅಶ್ವಿನಿ ಅಂಕಲಕೋಟಿ ಮಹಾಬಳೇಶ್ವರಪ್ಪ ಬೇವಿನಮರದ ಪ್ರವೀಣ ಬಾಳಿಕಾಯಿ ಸಿದ್ದನಗೌಡ ಬಳ್ಳೊಳ್ಳಿ ಚನ್ನಪ್ಪ ಜಗಲಿ ಡಾ.ಪಿ.ಡಿ. ತೋಟದ ಈಶ್ವರ ಮೇಡ್ಲೇರಿ ನಾಗರಾಜ ಕಳಸಾಪೂರ ಸಿ.ಜಿ. ಹಿರೇಮಠ ಸಮೀರ ಪೂಜಾರ ರಾಘವೇಂದ್ರ ಪೂಜಾರ ಮಾಲಾದೇವಿ ದಂದರಗಿ ಸುಮಾ ಚೋಟಗಲ್ ಪಾರ್ವತಿ ಕಳ್ಳಿಮಠ ಪೂರ್ಣಾಜಿ ಖರಾಟೆ ಸುರೇಶ ರಾಚನಾಯ್ಕರ್ ಬಸವರಾಜ ಮೆಣಸಿನಕಾಯಿ ಸುರೇಶ ಚೋಟಗಲ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.