ADVERTISEMENT

ಗಜೇಂದ್ರಗಡ: ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರ ಜಿಲ್ಲೆಯಲ್ಲಿ ರಸ್ತೆಗಳ ದುರವಸ್ಥೆ

ಸವಾರರಿಗೆ ಕಂಟಕವಾದ ಹದಗೆಟ್ಟ ರಸ್ತೆಗಳು

ಶ್ರೀಶೈಲ ಎಂ.ಕುಂಬಾರ
Published 10 ಡಿಸೆಂಬರ್ 2021, 2:31 IST
Last Updated 10 ಡಿಸೆಂಬರ್ 2021, 2:31 IST
ಗಜೇಂದ್ರಗಡ- ಕುಷ್ಟಗಿ ರಸ್ತೆ ಗುಂಡಿಗಳಿಂದ ಆವೃತವಾಗಿ ಸಂಪೂರ್ಣ ಹಾಳಾಗಿರುವುದು
ಗಜೇಂದ್ರಗಡ- ಕುಷ್ಟಗಿ ರಸ್ತೆ ಗುಂಡಿಗಳಿಂದ ಆವೃತವಾಗಿ ಸಂಪೂರ್ಣ ಹಾಳಾಗಿರುವುದು   

ಗಜೇಂದ್ರಗಡ: ಪಟ್ಟಣ ಸಂಪರ್ಕಿಸುವ ರಾಜ್ಯ ಹೆದ್ದಾರಿಗಳು ಹಾಗೂ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿವೆ. ರಸ್ತೆಗಳ ತುಂಬ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿವೆ.

ಪಟ್ಟಣದಿಂದ ಗದಗ, ಕುಷ್ಟಗಿ, ಇಳಕಲ್ ಹಾಗೂ ರೋಣ ಪಟ್ಟಣಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳ ತುಂಬಾ ಗುಂಡಿಗಳಿವೆ. ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ನಿತ್ಯ ಸರ್ಕಸ್ ಮಾಡುವುದರ ಜೊತೆಗೆ ನರಕದ ದರ್ಶನ ಮಾಡಿದಂತಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಪ್ರಮುಖ ರಸ್ತೆಗಳಾದ ಗಜೇಂದ್ರಗಡದಿಂದ ಇಳಕಲ್ ಸಂಪರ್ಕಿಸುವ ರಸ್ತೆ ತಾಲ್ಲೂಕಿನ ಗಡಿವರೆಗೆ (10 ಕಿ.ಮೀ.), ಸಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿ ಗಜೇಂದ್ರಗಡ-ರೋಣ ರಸ್ತೆಯ ಕತ್ರಾಳ ಗ್ರಾಮದಿಂದ ರೋಣ ಪಟ್ಟಣದವರೆಗೆ (20 ಕಿ.ಮೀ.) ಹಾಗೂ ಗಜೇಂದ್ರಗಡ-ಕುಷ್ಟಗಿ ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ತಾಲ್ಲೂಕಿನ ಗಡಿವರೆಗೆ (15 ಕಿ.ಮೀ.) ಹಾಗೂ ಗಜೇಂದ್ರಗಡದಿಂದ ಬಾದಾಮಿ ಸಂಪರ್ಕಿಸುವ ರಸ್ತೆ ಮುಶಿಗೇರಿ (18 ಕಿ.ಮೀ),

ADVERTISEMENT

ಗಜೇಂದ್ರಗಡದಿಂದ ಕಾಲಕಾಲೇಶ್ವರ ಮಾರ್ಗವಾಗಿ ಗುಡುರು ಸಂಪರ್ಕಿಸುವ ರಸ್ತೆ ಬಾದಿಮನಾಳ ಕ್ರಾಸ್‌ವರೆಗೆ (15 ಕಿ.ಮೀ.), ನಿಡಗುಂದಿ-ಸೂಡಿ (5 ಕಿ.ಮೀ.), ಸೂಡಿ-ದ್ಯಾಮುಣಸಿ (2 ಕಿ.ಮೀ.), ಸೂಡಿ-ಬೇವಿನಕಟ್ಟಿ (3 ಕಿ.ಮೀ.), ಕಾಲಕಾಲೇಶ್ವರ-ರಾಜೂರ (4 ಕಿ.ಮೀ.), ಗಜೇಂದ್ರಗಡ-ದಿಂಡೂರ ಒಳ ರಸ್ತೆ (8 ಕಿ.ಮೀ.), ರಾಮಾಪೂರ-ಹೊಸ ರಾಮಾಪೂರ (3 ಕಿ.ಮೀ.), ಇಟಗಿ-ಗುಳಗುಳಿ (4 ಕಿ.ಮೀ.), ಅಳಗುಂಡಿ-ಇಟಗಿ (5 ಕಿ.ಮೀ.), ಇಟಗಿ-ಹೊಸಳ್ಳಿ ಕ್ರಾಸ್ (4 ಕಿ.ಮೀ.) ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಈ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸಪಡಬೇಕಿದೆ.

‘ಪಕ್ಕದ ಕುಷ್ಟಗಿ, ಯಲಬುರ್ಗಾ, ಹುನಗುಂದ ತಾಲ್ಲೂಕಿನ ರಸ್ತೆಗಳು ಅತ್ಯಂತ ಗುಣಮಟ್ಟದಿಂದ ಕೂಡಿವೆ. ಆದರೆ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರ ತವರು ಜಿಲ್ಲೆಯಲ್ಲಿನ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಪದೇ ಪದೇ ಹಾಳಾಗುತ್ತಿರುವುದು ವಿಪರ್ಯಾಸ’ ಎಂದು ಸ್ಥಳೀಯರು ಕುಹಕವಾಡುತ್ತಿದ್ದಾರೆ.

ದುರಸ್ತಿಗೆ ಆಗ್ರಹ:

‘ಹಲವು ವರ್ಷಗಳಿಂದ ಗ್ರಾಮೀಣ ಭಾಗದ ರಸ್ತೆಗಳ ಮರು ಡಾಂಬರೀಕರಣ, ನಿರ್ವಹಣೆ ಕಾರ್ಯಗಳು ನಡೆದಿಲ್ಲ. ಇನ್ನಾದರೂ ಸಚಿವರು ತವರು ಜಿಲ್ಲೆಯಲ್ಲಿನ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು' ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ಬಸವರಾಜ ಶೀಲವಂತರ ಆಗ್ರಹಿಸಿದರು.

‘ಗಜೇಂದ್ರಗಡ ತಾಲ್ಲೂಕು ಕೇಂದ್ರದಿಂದ ಕುಷ್ಟಗಿ, ರೋಣ ಹಾಗೂ ಗದಗ ನಗರಗಳಿಗೆ ಪ್ರತಿನಿತ್ಯ ಒಂದಿಲ್ಲೊಂದು ಕೆಲಸದ ನಿಮಿತ್ತ ತಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸುವವರು ತಮ್ಮ ವಾಹನಗಳನ್ನು ಪದೇ ಪದೇ ಗ್ಯಾರೇಜಿನಲ್ಲಿ ದುರಸ್ತಿಗೆ ಬಿಡುವಷ್ಟು ರಸ್ತೆಗಳು ಹಾಳಾಗಿವೆ. ಸರ್ಕಾರ ಜನರಿಂದ ತೆರಿಗೆ ಕಟ್ಟಿಸಿಕೊಳ್ಳುವಲ್ಲಿ ತೋರುವ ಉತ್ಸಾಹವನ್ನು ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳುವಲ್ಲಿಯೂ ತೋರಿಸಬೇಕು' ಎಂದು ಸಿಪಿಎಂ ಮುಖಂಡ ಎಂ.ಎಸ್.ಹಡಪದ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.