ADVERTISEMENT

ರಾಹುಲ್‌ ಗಾಂಧಿ ಪಾರ್ಟ್‌ಟೈಂ ರಾಜಕಾರಣಿ: ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 16:20 IST
Last Updated 13 ಮಾರ್ಚ್ 2022, 16:20 IST
ಶ್ರೀರಾಮುಲು
ಶ್ರೀರಾಮುಲು   

ಗದಗ: ‘ಕಾಂಗ್ರೆಸ್‌ ಪಾರ್ಟ್‌ಟೈಂ ಪಕ್ಷವಾಗಿದ್ದು, ರಾಹುಲ್‌ ಗಾಂಧಿ ಪಾರ್ಟ್‌ಟೈಂ ರಾಜಕಾರಣಿ ಆಗಿದ್ದಾರೆ’ ಎಂದು ಸಾರಿಗೆ ಸಚಿವ ಶ್ರೀರಾಮುಲು ಲೇವಡಿ ಮಾಡಿದರು.

ಭಾನುವಾರ ಗದುಗಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನೋಡಿದಾಗ ಕಾಂಗ್ರೆಸ್ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿರುವುದು ಗೊತ್ತಾಗುತ್ತದೆ. ಅದೇರೀತಿ, ಕರ್ನಾಟಕದಲ್ಲೂ ಕಾಂಗ್ರೆಸ್‌ ತನ್ನ ಅಸ್ತಿತ್ವಕ್ಕಾಗಿ ಹುಡುಕಾಟ ನಡೆಸುತ್ತಿದೆ. ಕಾಂಗ್ರೆಸ್ ಹೋರಾಟಗಳೆಲ್ಲವೂ ನಾಟಕದ ಹೋರಾಟಗಳಾಗಿದ್ದು, ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಜನರು ನಮಗೇ ಬಹುಮತ ನೀಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇಬ್ಬರೂ ಸಿಎಂ ಹುದ್ದೆಗೆ ಕಿತ್ತಾಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು; ಅವರು ಮುಖ್ಯಮಂತ್ರಿ ಆಗುವುದು ಹಗಲುಗನಸಾಗಿಯೇ ಉಳಿಯಲಿದೆ’ ಎಂದರು.

ADVERTISEMENT

‘ಶಾಸಕ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸದಸ್ಯತ್ವಕ್ಕೆ ಉಡುಗೊರೆ ನೀಡುವ ಹೊಸ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಯಾರು ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸುತ್ತಾರೋ ಅವರಿಗೆ ಟಂಟಂ, ಬೈಕ್‌ನ್ನು ಉಡುಗೊರೆಯಾಗಿ ನೀಡುವ ದಯನೀಯ ಸ್ಥಿತಿಗೆ ಕಾಂಗ್ರೆಸ್‌ ಕುಸಿದಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.