ADVERTISEMENT

ಲಕ್ಷ್ಮೇಶ್ವರ | ರಾಶಿಯಲ್ಲೇ ಮೊಳಕೆಯೊಡೆದ ಗೋವಿನಜೋಳ: ರೈತರ ಸಂಕಷ್ಟ ಇಮ್ಮಡಿಸಿದ ಮಳೆ

ನಾಗರಾಜ ಎಸ್‌.ಹಣಗಿ
Published 27 ಅಕ್ಟೋಬರ್ 2025, 2:53 IST
Last Updated 27 ಅಕ್ಟೋಬರ್ 2025, 2:53 IST
ಲಕ್ಷ್ಮೇಶ್ವರ ತಾಲ್ಲೂಕಿನ ಹರದಗಟ್ಟಿ ಭಾಗದಲ್ಲಿ ರೈತರು ಕೊಯ್ಲು ಮಾಡಿ ಒಣಗಿಸಲು ಹಾಕಿದ್ದ ಗೋವಿನಜೋಳ ರಾಶಿಯಲ್ಲೇ ಮೊಳಕೆ ಬಂದಿರುವ ಕಾಳು
ಲಕ್ಷ್ಮೇಶ್ವರ ತಾಲ್ಲೂಕಿನ ಹರದಗಟ್ಟಿ ಭಾಗದಲ್ಲಿ ರೈತರು ಕೊಯ್ಲು ಮಾಡಿ ಒಣಗಿಸಲು ಹಾಕಿದ್ದ ಗೋವಿನಜೋಳ ರಾಶಿಯಲ್ಲೇ ಮೊಳಕೆ ಬಂದಿರುವ ಕಾಳು   

ಲಕ್ಷ್ಮೇಶ್ವರ: ಈ ವರ್ಷದ ಮಳೆ ರೈತರ ಪಾಲಿಗೆ ವೈರಿಯಾಗಿ ಪರಿಣಮಿಸಿದ್ದು ಈಗಾಗಲೇ ಹೆಸರು, ಕಂಠಿಶೇಂಗಾ, ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳನ್ನು ಆಹುತಿ ಪಡೆದಿದೆ. ಇದೀಗ ಗೋವಿನಜೋಳ ಕೂಡ ಇದೇ ಹಾದಿಯಲ್ಲಿದ್ದು ರೈತರಿಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ.

ಸೊಗಸಾಗಿ ಬೆಳೆದಿದ್ದ ಗೋವಿನಜೋಳ ಚೆನ್ನಾಗಿ ಕಾಳುಕಟ್ಟಿ ತೆನೆ ಬಿಟ್ಟಿತ್ತು. ಇನ್ನೇನು ಕೊಯ್ಲು ಮಾಡಿ ಮಾರಾಟ ಮಾಡುವ ಹಂತಕ್ಕೂ ಬಂದಿತ್ತು. ಅಷ್ಟರಲ್ಲಿ ಮತ್ತೇ ಆರಂಭಗೊಂಡ ಮಳೆ ಒಕ್ಕಣಿಗೆ ಅಡ್ಡಿ ಆಗಿದೆ. ಈ ವರ್ಷ ಯಾವ ಬೆಳೆಯೂ ರೈತರಿಗೆ ದಕ್ಕಿಲ್ಲ. ಕೊನೆಗೆ ಗೋವಿನಜೋಳವಾದರೂ ಅಲ್ಪಸ್ವಲ್ಪ ಆದಾಯ ತರಬಹುದು ಎಂಬುದು ರೈತರ ಲೆಕ್ಕಾಚಾರ ಆಗಿತ್ತು. ಆದರೆ ಅವರ ಲೆಕ್ಕಾಚಾರವನ್ನೂ ಮಳೆರಾಯ ಬುಡಮೇಲು ಮಾಡಿದ್ದಾನೆ.

ಪ್ರಸ್ತುತ ಸಾಲಿನಲ್ಲಿ ತಾಲ್ಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‌ನಲ್ಲಿ ಗೋವಿನಜೋಳ ಬೆಳೆಯಲಾಗಿದೆ. ಕಳೆದ ವಾರ ಒಂದೆರಡು ದಿನ ಮಳೆ ಕಡಿಮೆ ಆಗಿತ್ತು. ಆಗ ಕೆಲವು ರೈತರು ಗೋವಿನಜೋಳವನ್ನು ಕೊಯ್ಲು ಮಾಡಿ ಕಣದಲ್ಲಿ ಒಣಗಿಸಲು ಹಾಕಿದ್ದರು. ಆದರೆ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಕೊಯ್ಲು ಮಾಡಿರುವ ಫಸಲನ್ನು ಬಲಿ ಪಡೆಯುತ್ತಿದೆ.

ADVERTISEMENT

ಧಾರಾಕಾರವಾಗಿ ಸುರಿದ ಮಳೆ ಮತ್ತು ಬಿರುಸಾಗಿ ಬೀಸಿದ ಗಾಳಿಗೆ ಗೋವಿನಜೋಳ ನೆಲಕ್ಕೆ ಬಿದ್ದು ಅದು ಬಿದ್ದಲ್ಲಿಯೇ ಮೊಳಕೆ ಒಡೆಯುತ್ತಿದೆ. ಅಲ್ಲದೆ ಕೊಯ್ಲು ಮಾಡಿ ಒಣ ಹಾಕಿದ್ದ ರಾಶಿಯಲ್ಲೇ ಮೊಳಕೆ ಬಂದಿದೆ.

ಖರ್ಚು ಕಡಿಮೆ ಎನ್ನುವ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳದ ಬಿತ್ತನೆ ಆಗಿದೆ. ಆರಂಭದಲ್ಲಿ ಸಕಾಲಕ್ಕೆ ಮಳೆ ಸುರಿದ ಕಾರಣ ಬೆಳೆಯೂ ಚೆನ್ನಾಗಿ ಬೆಳೆದಿತ್ತು. ಆದರೆ ಒಕ್ಕಣಿ ಸಮಯಕ್ಕೆ ಮತ್ತೆ ಸುರಿಯಲು ಆರಂಭಿಸಿದ್ದರಿಂದ ಬಂದ ಬೆಳೆಯೂ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಿಂದಲೂ ಬೆಳೆ ಕಳೆದುಕೊಂಡಿರುವ ರೈತರು ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.

ಲಕ್ಷ್ಮೇಶ್ವರ ತಾಲ್ಲೂಕಿನ ಹರದಗಟ್ಟಿ ಭಾಗದಲ್ಲಿ ರೈತರು ಕೊಯ್ಲು ಮಾಡಿ ಒಣ ಹಾಕಿರುವ ಗೋವಿನಜೋಳ ರಾಶಿಯಲ್ಲಿ ಮೊಳಕೆ ಬಂದ ಕಾಳನ್ನು ಆರಿಸಿ ತೆಗೆಯುತ್ತಿರುವುದು

ಪರಿಹಾರಕ್ಕೆ ಆಗ್ರಹ

‘ಮಳೆ ಬಿಡುವು ನೀಡದ ಕಾರಣ ಗೋವಿನಜೋಳ ಒಕ್ಕಣಿ ಮಾಡಲು ಆಗುತ್ತಿಲ್ಲ. ಈಗಾಗಲೇ ಒಕ್ಕಣಿ ಮಾಡಿ ರಾಶಿ ಹಾಕಿರುವ ಕೆಲ ರೈತರ ಫಸಲು ಇಟ್ಟಲ್ಲಿಯೇ ಮೊಳಕೆ ಒಡೆಯುತ್ತಿದೆ. ಹೀಗಾದರೆ ಖರೀದಿದಾರರು ಖರೀದಿ ಮಾಡಲು ಹಿಂಜರಿಯುತ್ತಾರೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ವಿಮೆ ಕಂಪನಿಯವರು ರೈತರಿಗೆ ವಿಮೆ ಪರಿಹಾರ ನೀಡಬೇಕು’ ಎಂದು ರೈತ ಮುಖಂಡರಾದ ಟಾಕಪ್ಪ ಸಾತಪುತೆ ಹಾಗೂ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.