ADVERTISEMENT

ಮುಂಗಾರಿಗೆ ಮುನ್ನವೇ ನೀರಿಂಗಿಸುವ ಯತ್ನ..!

ಆರ್ಟ್‌ ಆಫ್‌ ಲಿವಿಂಗ್‌; ಗ್ರಾಮೀಣಾಭಿವೃದ್ಧಿ ಇಲಾಖೆ ಸಹಭಾಗಿತ್ವದ ಯೋಜನೆ

ವಿರುಪಾಕ್ಷ ಕಲಬುರ್ಗಿ
Published 20 ಏಪ್ರಿಲ್ 2019, 20:00 IST
Last Updated 20 ಏಪ್ರಿಲ್ 2019, 20:00 IST
ಹೊಳೆ ಆಲೂರು ಸಮೀಪದ ಕುರಹಟ್ಟಿ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಇಂಗುಗುಂಡಿಯನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರಾಜ್ಯ ನಿರ್ದೇಶಕ ನಾಗರಾಜ ಅವರು ವೀಕ್ಷಿಸಿದರು
ಹೊಳೆ ಆಲೂರು ಸಮೀಪದ ಕುರಹಟ್ಟಿ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಇಂಗುಗುಂಡಿಯನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರಾಜ್ಯ ನಿರ್ದೇಶಕ ನಾಗರಾಜ ಅವರು ವೀಕ್ಷಿಸಿದರು   

ಹೊಳೆಆಲೂರ: ಸತತ ಬರ ಮತ್ತು ಮಳೆ ಕೊರತೆ ಎದುರಿಸುತ್ತಿರುವ ಹೋಬಳಿ ವ್ಯಾಪ್ತಿಯಲ್ಲಿ, ಮಳೆಗಾಲಕ್ಕೆ ಮುನ್ನವೇ ಮಳೆ ನೀರನ್ನು ಇಂಗಿಸಲು ಬೇಕಿರುವ ಸಿದ್ಧತೆಗಳು ಚುರುಕು ಪಡೆದಿವೆ. ಆರ್ಟ್ ಆಫ್‌ ಲಿವಿಂಗ್‌ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಭಾಗಿತ್ವದಲ್ಲಿ ಹಳ್ಳಗಳಲ್ಲಿ, ಅಲ್ಲಲ್ಲಿ ಅಂತರ್ಜಲ ಮರುಪೂರಣಕ್ಕಾಗಿ ಇಂಗು ಗುಂಡಿಗಳನ್ನು ನಿರ್ಮಿಸುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಬರುವ ಸಣ್ಣ ಹಳ್ಳಗಳ ನಡುವೆ ಅಲ್ಲಲ್ಲಿ ಇಂತಹ ಗುಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ಹಳ್ಳಗಳ ಮೂಲಕ ಹರಿದುಬರುವ ಮಳೆ ನೀರು ಈ ಗುಂಡಿಗಳಲ್ಲಿ ಇಂಗುತ್ತದೆ.ಪರಿಣಾಮ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಬಿರು ಬೇಸಿಗೆಯಲ್ಲೂ ಹಳ್ಳಗಳ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಸಮೃದ್ಧ ನೀರು ಲಭಿಸುತ್ತದೆ.

ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ದೀರ್ಘಾವಧಿಯ ಯೋಜನೆ ಇದು. ತಾಲ್ಲೂಕು ವ್ಯಾಪ್ತಿಯ 35 ಗ್ರಾಮ ಪಂಚಾಯ್ತಿಗಳಲ್ಲಿ 18 ಪಂಚಾಯ್ತಿಗಳಲ್ಲಿ ಈಗಾಗಲೇ ಈ ಕಾಮಗಾರಿ ಭರದಿಂದ ನಡೆದಿದೆ. ಹಳ್ಳಗಳಿಗೆ ಅಡ್ಡವಾಗಿ ಕಲ್ಲಿನಿಂದ ಪುಟ್ಟ ತಡೆಗೋಡೆ ನಿರ್ಮಿಸಿ,ನೀರು ನಿಧಾನವಾಗಿ ಹರಿದು ಬಂದು ಈ ಗುಂಡಿಯಲ್ಲಿ ಇಂಗುವಂತೆ ಯೋಜನೆ ರೂಪಿಸಲಾಗಿದೆ.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 4482 ಇಂಗು ಗುಂಡಿಗಳನ್ನು ನಿರ್ಮಿಸುವ ಗುರಿಯನ್ನು ಆರ್ಟ್‌ ಆಫ್‌ ಲಿವಿಂಗ್ ಸಂಸ್ಥೆ ಹೊಂದಿದೆ. ಇದರಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಗುಂಡಿಗಳನ್ನು ನಿರ್ಮಿಸಲಾಗಿದೆ. ಪ್ರತಿ ಗುಂಡಿಗೆ ನರೇಗಾದಡಿ ₹ 1.23 ಲಕ್ಷ ಖರ್ಚು ಭರಿಸಲಾಗುತ್ತದೆ. ಈ ಯೋಜನೆಗೆ ಅಂದಾಜು ₹4.48 ಕೋಟಿ ಮೊತ್ತದ ಕ್ರೀಯಾ ಯೋಜನೆಗೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ಪಡೆಯಲಾಗಿದೆ. ಪ್ರತಿ ಗುಂಡಿ 20 ಅಡಿ ಆಳ ಹಾಗೂ 4 ಅಡಿ ಅಗಲ ಇರುತ್ತದೆ. ಇದಕ್ಕೆ ರಿಂಗ್ ಅಳವಡಿಸಿ ಮೇಲೆ ಮುಚ್ಚಳ ಹಾಕಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.