ಗದಗ: ‘ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು’ ಎಂದು ಸಿಐಟಿಯು ಗದಗ ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ ಆಗ್ರಹಿಸಿದರು.
ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಹಾಗೂ ರೈತ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ಕರೆ ನೀಡಿದ್ದ ಭಾರತ್ ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಕಾರ್ಮಿಕ ವರ್ಗದ ತೀವ್ರ ವಿರೋಧದ ನಡುವೆಯೂ 2019ರ ಸಂಸತ್ ಅಧಿವೇಶನ ಹಾಗೂ 2020ರಲ್ಲಿ ನಡೆದ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳ ಬದಲಾಗಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ಹಾಗೂ ವೇತನ ಸಂಹಿತೆಗಳನ್ನಾಗಿ ಅಂಗೀಕರಿಸಲಾಗಿದೆ. ದೇಶದ ಕಾರ್ಮಿಕ ವರ್ಗದ ಬೃಹತ್ ಹೋರಾಟದ ಕಾರಣದಿಂದಾಗಿ ಈ ಸಂಹಿತೆಗಳನ್ನು ಇನ್ನೂ ಜಾರಿಮಾಡಲು ಸಾಧ್ಯವಾಗಿಲ್ಲ. ಆದರೂ ಕೇಂದ್ರ ಸರ್ಕಾರ ಈ ಸಂಹಿತೆಗಳನ್ನು ಜಾರಿಮಾಡಲು ಪ್ರಯತ್ನ ಮಾಡುತ್ತಲೇ ಇರುವುದು ಅಕ್ಷಮ್ಯ’ ಎಂದು ಕಿಡಿಕಾರಿದರು.
‘ಇನ್ನೊಂದೆಡೆ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ, ಹಿಂಬಾಗಿಲಿನಿಂದ ಕಾರ್ಮಿಕ ಸಂಹಿತೆಗಳ ಅಂಶಗಳನ್ನು ಜಾರಿಮಾಡಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಪ್ರಗತಿಗೆ ಶ್ರಮಿಸಬೇಕೇ ಹೊರತು ಹತ್ತಿಕ್ಕಲು ಮುಂದಾಗುವುದು ಸರಿಯಲ್ಲ’ ಎಂದು ದೂರಿದರು.
ಪ್ರತಿಭಟನೆ ಬಳಿಕ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಹಾಗೂ ರೈತ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗೆ ಗದಗ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಲಾಯಿತು.
ಕಾರ್ಮಿಕ ಮುಖಂಡರಾದ ಮೈಬು ಹವಾಲ್ದಾರ, ಹನಮಂತ ಮಾದರ, ಮುತ್ತಪ್ಪ ಚಲವಾದಿ, ಶಾರದಾ ರೋಣದ, ಶಾರದಾ ಹಳೆಮನಿ, ಗಿರಿಜಾ ಮಾಚಕನೂರ, ಅಕ್ಕಮ್ಮ ನೆರೇಗಲ್, ಜ್ಯೋತಿ ಹಿರೇಮಠ, ಸುಶೀಲಾ ಚಲವಾದಿ, ಕಮಲಾಕ್ಷಿ ಬಿಳಗಿ, ಗಂಗಮ್ಮ ದೇವರಡ್ಡಿ, ಮಂಗಳಾ ಪಟ್ಟಣಶಟ್ಟಿ, ಗೀತಾ ಪಾಟೀಲ, ನೀಲಮ್ಮ ಹಿರೇಮಠ, ವಾಲಿ, ಯಶೋದಾ ಬೆಟಗೇರಿ, ನಾಗರತ್ನ ಬಡಗನ್ನವರ, ವಿಜಯಲಕ್ಷ್ಮಿ ಪ್ರೇಮಾ, ಹಾಲಪ್ಪ ತಾಂಬ್ರಗುಂಡಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
l ರಾಜ್ಯದಲ್ಲಿ ದುಡಿಮೆ ಅವಧಿಯನ್ನು ದಿನಕ್ಕೆ 10-12 ಗಂಟೆಗೆ ಹೆಚ್ಚಿಸುವ
ಅವೈಜ್ಞಾನಿಕ ಪ್ರಸ್ತಾವ ಕೈಬಿಡಬೇಕು
l ಜೀವನ ಯೋಗ್ಯ ಕನಿಷ್ಠ ವೇತನ ₹36 ಸಾವಿರ ನಿಗದಿಮಾಡಬೇಕು l ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ ₹8 ಸಾವಿರ ನೀಡಬೇಕು l ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು l ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿ ₹600ಕ್ಕೆ, ದುಡಿತದ
ದಿನಗಳನ್ನು 200ಕ್ಕೆ ಹೆಚ್ಚಿಸಬೇಕು l ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಕಾರ್ಮಿಕರನ್ನು ಕನಿಷ್ಠ
ವೇತನ ವ್ಯಾಪ್ತಿಗೆ ಒಳಪಡಿಸಬೇಕು l ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ
ಸೌಲಭ್ಯಗಳನ್ನು ಜಾರಿಗೊಳಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.