ಗಜೇಂದ್ರಗಡ (ಅಂದಾನಪ್ಪ ದೊಡ್ಡಮೇಟಿ- ಅಬ್ಬಿಗೇರಿ ವಿರುಪಾಕ್ಷಪ್ಪ ವೇದಿಕೆ): ‘ಕನ್ನಡನಾಡಿನಲ್ಲಿಯೇ ಗದಗ ಜಿಲ್ಲೆ ವಿಶೇಷವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಕೊಡುಗೆ ನೀಡುವ ಮೂಲಕ ಕನ್ನಡ, ಕರ್ನಾಟಕದ ಏಳ್ಗೆಗೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದೆ’ ಎಂದು ಮುಂಡರಗಿಯ ಸಾಹಿತಿ ಆರ್.ಎಲ್.ಪೊಲೀಸ್ ಪಾಟೀಲ ಹೇಳಿದರು.
ಪಟ್ಟಣದ ತೋಂಟದಾರ್ಯ ಸಿಬಿಎಸ್ಇ ಶಾಲೆಯಲ್ಲಿ ಮಂಗಳವಾರ ನಡೆದ ಗದಗ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ಗೋಷ್ಠಿ ‘ಗದಗ ಜಿಲ್ಲೆಯ ವಿಶೇಷ’ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಶಿಕ್ಷಣ, ಸಾಹಿತ್ಯ, ಅಧ್ಯಾತ್ಮಿಕ ಹಾಗೂ ಮುದ್ರಣ ಕ್ಷೇತ್ರದಲ್ಲಿ ಗದಗ ಜಿಲ್ಲೆ ಭಾರತದಲ್ಲಿಯೇ ವಿಶಿಷ್ಟತೆ ಮೆರೆದಿದೆ. ಗದಗ ಜಿಲ್ಲೆ ಚಿಕ್ಕದಾದರೂ ಕೊಡುಗೆಯಲ್ಲಿ ದೊಡ್ಡದು. ಇಲ್ಲಿನ ಪರಿಸರದಲ್ಲಿ ಔಷಧಿ ಗುಣವಿದೆ. ಗಾಳಿಯಲ್ಲಿ ವಿದ್ಯುತ್ ಇದೆ. ಮಣ್ಣಿನಲ್ಲಿ ಚಿನ್ನವಿದೆ. ಸಂಪತ್ತಿನ ಖನಿಜವಿದೆ. ಆದ್ದರಿಂದ ಕಪ್ಪತ್ತಗುಡ್ಡದ ರಕ್ಷಣೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಸ್ವಾತಂತ್ರ್ಯ ಹೋರಾಟಕ್ಕಿಂತ ಮೊದಲೇ ಗದಗ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕಿಡಿ ಹೊತ್ತಿಸಿದ್ದು ಈ ನೆಲದ ಸಾಹಿತ್ಯ. ಗದಗ ಜಿಲ್ಲೆಯ ಸಾಹಿತ್ಯ ಓದಲಾರಂಭಿಸಿದರೆ ಕನ್ನಡನಾಡಿನ ಸಾಹಿತ್ಯ ಚರಿತ್ರೆ ಓದಿದಂತಾಗುತ್ತದೆ. ಜಿಲ್ಲೆಯ ಎಲ್ಲ ಮಠಗಳು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿವೆ. ಮಠಾಧೀಶರು ಸಾಹಿತಿಗಳಾಗಿದ್ದು ವಿಶೇಷವೇ ಸರಿ’ ಎಂದರು.
‘ಪಂ.ಪುಟ್ಟರಾಜ ಗವಾಯಿಗಳು ಮೂರು ಭಾಷೆಯಲ್ಲಿ 80ಕ್ಕೂ ಹೆಚ್ಚು ಗ್ರಂಥ ರಚಿಸಿದರೆ, ಮುಂಡರಗಿ ಅನ್ನದಾನ ಶ್ರೀಗಳು 160ಕ್ಕೂ ಹೆಚ್ಚು ಗ್ರಂಥ ರಚನೆಯಾಗಿ 19 ಸಂಪುಟಗಳಲ್ಲಿ ಪ್ರಕಟವಾಗಿರುವುದು ವಿಶೇಷ. 600 ಶಾಸನಗಳು ಗದಗ ಜಿಲ್ಲೆಯಲ್ಲಿವೆ. ಅವುಗಳ ಅಧ್ಯಯನವಾಗಬೇಕು. ಆದ್ದರಿಂದ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಪಸರಿಸುವ ಕೆಲಸ ಮುಂದುವರಿಸಬೇಕು’ ಎಂದರು.
‘ಕರ್ನಾಟಕ ನಾಮಕರಣ’ ಕುರಿತು ಉಪನ್ಯಾಸ ನೀಡಿದ ಚಿಂತಕ ರವೀಂದ್ರನಾಥ ದೊಡ್ಡಮೇಟಿ, ‘ಕರ್ನಾಟಕ ನಾಮಕರಣವೇ ರೋಚಕ ಇತಿಹಾಸ. ಕರ್ನಾಟಕ ಎಂಬ ಪದ ಸಹಜವಾಗಿಯೇ ನಮ್ಮ ನಾಡಿಗೆ ಸಂದಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ಏಕೀಕರಣ ಹೋರಾಟ ಜೊತೆಜೊತೆಯಾಗಿಯೇ ನಡೆದಿದೆ. ಕರ್ನಾಟಕ ಎನ್ನುವ ಪದ ಪ್ರಾಚೀನ ಇತಿಹಾಸದಿಂದಲೇ ನಮ್ಮ ನಾಡಿಗೆ ಬಂದಿದೆ. ರಾಷ್ಟ್ರಕೂಟ, ಕದಂಬ, ಚಾಲುಕ್ಯರು, ವಿಜಯನಗರದ ಅರಸರು ಕರ್ನಾಟಕ ಎಂಬ ಹೆಸರಿನಿಂದ ಸೈನ್ಯ, ಚಿಹ್ನೆ, ಕೃತಿ ರಚನೆ, ಬಿರುದುಗಳನ್ನು ಬಳಸಿರುವುದು ಕಾಣುತ್ತದೆ. ಆದರೆ, ಗಂಗಾಧರರಾವ್ ದೇಶಪಾಂಡೆ, ಅಂದಾನಪ್ಪ ದೊಡಮೇಟಿ ಅವರ ನಿರಂತರ ಪ್ರಯತ್ನದ ಫಲವಾಗಿ ಕರ್ನಾಟಕ ನಾಮಕರಣವಾಯಿತು’ ಎಂದರು.
ಪ್ರತಿಯೊಬ್ಬ ಕನ್ನಡಿಗ ಕರ್ನಾಟಕದ ಚರಿತ್ರೆ ಅರಿಯಬೇಕು. ಅಖಂಡ ಕರ್ನಾಟಕವಾಗಿರಲು ಎಲ್ಲರೂ ಒಂದಾಗಿ ಸಂಕಲ್ಪ ತೊಡಬೇಕು ಎಂದು ಹೇಳಿದರು.
ಆಶಯ ಭಾಷಣ ಮಾಡಿದ ಲಕ್ಷ್ಮೇಶ್ವರದ ಜಯಶ್ರೀ ಹೊಸಮನಿ, ಗದಗ ಜಿಲ್ಲೆ ಎಲ್ಲದರಲ್ಲೂ ದೈವದ ಧೀಶಕ್ತಿ ಹೊಂದಿದೆ. ಕುಮಾರವ್ಯಾಸನ ನಾಡು ಕುವೆಂಪು ಆದಿಯಾಗಿ ಎಲ್ಲರಿಂದಲೂ ಹೊಗಳಿಸಿಕೊಂಡಿದ್ದು ಜಿಲ್ಲೆಯ ಹಿರಿಮೆ ಸಾರುತ್ತದೆ ಎಂದರು.
ಹುಯಿಲಗೋಳ ನಾರಾಯಣರಾಯರ ಕುರಿತು ಮುಕ್ತಾ ಉಡುಪಿ ಮಾತನಾಡಿ, ಉದಯವಾಗಲಿ ಚೆಲುವ ಕನ್ನಡ ನಾಡು ಪದ್ಯದ ಕುರಿತು ವಿವರಿಸಿದರು.
‘ಗದಗ ಜಿಲ್ಲೆಯಲ್ಲಿ ಗಾಂಧೀಜಿ’ ವಿಷಯ ಕುರಿತು ಆರ್‌ಡಿಪಿಆರ್ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರಕಾಶ ಮಾಚೇನಹಳ್ಳಿ ಮಾತನಾಡಿದರು.
ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ, ಎಸ್.ಎಸ್.ಸೋಮಣ್ಣವರ, ಬಿ.ಎಫ್.ಪೂಜಾರ, ಎಂ.ಕೆ.ಲಮಾಣಿ, ಪ್ರವೀಣ ಹುಲಗೂರ ಇದ್ದರು. ಬಿ.ಬಿ.ಕುರಿ ಸ್ವಾಗತಿಸಿದರು. ಅರವಿಂದ ಕವಡಿಮಟ್ಟಿ ನಿರೂಪಿಸಿದರು. ಶಿವಾನಂದ ಭಜಂತ್ರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.