ADVERTISEMENT

ಡಂಬಳ | ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿ ಪೂರ್ಣ

ಬಸವೇಶ್ವರ ವೃತ್ತದಿಂದ ಮಹಾದ್ವಾರದವರೆಗಿನ ಮಾರ್ಗ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 5:38 IST
Last Updated 8 ಫೆಬ್ರುವರಿ 2024, 5:38 IST
<div class="paragraphs"><p>ಡಂಬಳದ ಗದಗ ಮಾರ್ಗಕ್ಕೆ ಹೋಗುವ ರಸ್ತೆ ಡಾಂಬರೀಕರಣವಾಗಿದ್ದರಿಂದ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ</p></div>

ಡಂಬಳದ ಗದಗ ಮಾರ್ಗಕ್ಕೆ ಹೋಗುವ ರಸ್ತೆ ಡಾಂಬರೀಕರಣವಾಗಿದ್ದರಿಂದ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ

   

ಡಂಬಳ: ಕಾರಣಾಂತರದಿಂದ ನನೆಗುದಿಗೆ ಬಿದ್ದಿದ್ದ ಸ್ಥಳೀಯ ಬಸವೇಶ್ವರ ವೃತ್ತದಿಂದ ಲಿಂ. ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳ ಮಹಾದ್ವಾರದವರಿಗಿನ ಡಂಬಳದಿಂದ ಗದಗ ಮಾರ್ಗಗಕ್ಕೆ ಸಂಪರ್ಕ ಕಲ್ಪಸುವ ರಸ್ತೆ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ.

‘ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ನಮ್ಮ ಗ್ರಾಮದ ಐತಿಹಾಸಿಕ ಹಿನ್ನೆಲೆಯ ದೊಡ್ಡಬಸವೇಶ್ವರ ಮತ್ತು ಸೋಮೇಶ್ವರ ದೇವಸ್ಥಾನಗಳನ್ನು ಪ್ರಯಾಣಿಕರು ಬಸ್‍ನಿಂದಲೆ ನೋಡುವುದು ಕಣ್ಮರೆಯಾಗಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿರುವುದು ಶ್ಲಾಘನೀಯ’ ಎಂದು ಡಂಬಳದ ಸಾಮಾಜಿಕ ಕಾರ್ಯಕರ್ತರಾದ ಈರಣ್ಣ ನಂಜಪ್ಪನವರ ಮತ್ತು ಮಹೇಶ ಬಿಸನಹಳ್ಳಿ ತಿಳಿಸಿದರು.

ADVERTISEMENT

ಲೋಕೋಪಯೋಗಿ ಇಲಾಖೆಯು ₹90 ಲಕ್ಷ ವಿಶೇಷ ಅನುದಾನದಲ್ಲಿ ಸ್ಥಗಿತಗೊಂಡಿದ್ದ ಸಿಸಿ ರಸ್ತೆ ಮತ್ತು ಡಾಂಬರ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ಈಗ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲಿದೆ. 

ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಗದಗ ಮುಂಡರಗಿ ದಾವಣಗೆರೆ,ಬೆಂಗಳೂರ,ಮೈಸೂರ,ಹುಬ್ಬಳ್ಳಿ,ಧಾರವಾಡ, ಕಾರವಾರ, ಪಣಜಿ ಮುಂತಾದ ಭಾಗಗಳಿಗೆ ಸಂಚಾರ ಮಾಡುವ ಸಾರಿಗೆ ವಾಹನ ಸೇರಿದಂತೆ ಇತರೆ ವಾಹನಗಳು ರಸ್ತೆ ಹದಗೆಟ್ಟ ಪರಿಣಾಮ ಬೇರೆ ಮಾರ್ಗದಿಂದ ಸಂಚಾರ ಮಾಡುತ್ತಿದ್ದವು. ಬೇರೆ ಮಾರ್ಗದಿಂದ ಸಂಚಾರ ಮಾಡುವದರಿಂದ ಸವಾರರಿಗೆ ಮತ್ತು ಪ್ರಯಾಣಿಕರಿಗೂ ಸಾಕಷ್ಟು ಅಡಚಣೆಯಾಗಿತ್ತು. ಅಲ್ಲದೆ ಕೆಲವೊಂದು ಬಸ್‍ಗಳು ಡಂಬಳ ಗ್ರಾಮಕ್ಕೆ ಪ್ರವೇಶ ಮಾಡದೆ ಬೈಪಾಸ್ ರಸ್ತೆಯಲ್ಲೆ ಹೋಗುತ್ತಿದ್ದವು.

‘ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಸಾರ್ವಜನಿಕರಿಗೆ ಬಹುದಿನದ ಬೇಡಿಕೆಗೆ ಸ್ಪಂದನೆ ದೊರೆತಿದೆ‘ ಎಂದು ಡಂಬಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ ತಿಳಿಸಿದರು.

ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ವಿವಿಧ ಗ್ರಾಮಗಳಿಗೆ ಹೋಗಲು ಎಲ್ಲಿ ನಿಲ್ಲಬೇಕು ಎನ್ನುವ ಗೊಂದಲದಲ್ಲಿ ಇದ್ದರು. ಸಾರಿಗೆ ಬಸ್ ಚಾಲಕರು ಬಸ್ ಎಲ್ಲಿ ನಿಲ್ಲಿಸಬೇಕು ಎನ್ನುವ ಗೊಂದಲದಲ್ಲಿ ಇದ್ದರು. ರಸ್ತೆ ಹದಗೆಟ್ಟಿದ್ದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿತ್ತು.

ಸಿಸಿ ರಸ್ತೆ ನಿರ್ಮಾಣಗೊಂಡಿದ್ದರೂ ಡಾಂಬರ ರಸ್ತೆಯಿಲ್ಲದೆ ಸಂಚಾರ ಸ್ಥಗಿತಗೊಂಡಿತು. ರಸ್ತೆಯಲ್ಲಿ ತಗ್ಗು ಗುಂಡಿ ಸೇರಿದಂತೆ ರಸ್ತೆ ಹದಗೆಟ್ಟ ಪರಿಣಾಮ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿತ್ತು. ರಸ್ತೆ ಹದಗೆಟ್ಟ ಪರಿಣಾಮ ಸಾರಿಗೆ ಬಸ್ ಸೇರಿದಂತೆ ಇತರೆ ವಾಹನಗಳು ಗದಗ ಮತ್ತು ಮುಂಡರಗಿ ಭಾಗಕ್ಕೆ ಹೋಗಲು ಬೇರೆ ಮಾರ್ಗದಿಂದ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಶಾಸಕ ಜಿ.ಎಸ್.ಪಾಟೀಲ ಅವರ ಕಾಳಜಿ ಮತ್ತು ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ನಾಗೇಂದ್ರ ಪಟ್ಟಣ್ಣಶೆಟ್ಟಿ, ‘ಸಿಸಿ ರಸ್ತೆ ನಿರ್ಮಾಣವಾಗಿದ್ದರೂ ಹಲವು ತಾಂತ್ರಿಕ ತೊಂದರೆಯಿಂದ ಡಾಂಬರ ರಸ್ತೆ ನಿರ್ಮಾಣವಾಗುವುದು ಸ್ಥಗಿತಗೊಂಡಿತ್ತು. ಇದರಿಂದ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು ಸಂಚಾರಕ್ಕೆ ಮುಕ್ತವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.