ರೋಣ: ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈಜುಕೊಳ ಕಾಮಗಾರಿ ನಿಧಾನ
ಗತಿಯಲ್ಲಿ ಸಾಗುತ್ತಿದ್ದು, ಕಳಪೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ವರ್ಷ ಮಾರ್ಚ್ 16 ರಂದು ಪ್ರಾರಂಭಗೊಂಡ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಕಾಮಗಾರಿಗೆ ಬಳಸುತ್ತಿರುವ ಇಟ್ಟಿಗೆ ಕಳಪೆ ಗುಣಮಟ್ಟದ್ದಾಗಿದ್ದು, ನಿರ್ಮಾಣ ಹಂತದಲ್ಲಿಯೇ ಇಟ್ಟಿಗೆಗಳು ಉದುರುತ್ತಿದೆ. ಸರಿಯಾದ ನೀರು ನಿರ್ವಹಣೆಯಾಗದ ಕಾರಣ ಈಜುಕೊಳ ಗುಣಮಟ್ಟ ಕಳೆದುಕೊಳ್ಳುತ್ತಿದೆ.
ಈ ಕುರಿತು ಕೆ.ಆರ್.ಐ.ಡಿ.ಎಲ್ (ಲ್ಯಾಂಡ್ ಆರ್ಮಿ) ಎಂಜಿನಿಯರ್ ಅವರನ್ನು ಸಂಪರ್ಕಿಸಿದರೆ ಮೇಲಿನ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೆ.ಆರ್.ಐ.ಡಿ.ಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಜಾತಾ ಕಾಳೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ದೂರವಾಣಿ ಕರೆ ಸ್ವೀಕರಿಸದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಶಯ ಪಡುವಂತಾಗಿದೆ.
ಈಜುಕೊಳ ನಿರ್ಮಾಣ ಕಾಮಗಾರಿಗಾಗಿ ಭೂಮಿ ಅಗೆದಿದ್ದು ಅದರಿಂದ ಹೊರತೆಗೆದ ಮಣ್ಣನ್ನು ಕ್ರೀಡಾಂಗಣದ ಸುತ್ತ ಅಳವಡಿಸಿರುವ ಜಾಲರಿ ಪಕ್ಕದಲ್ಲಿಯೇ ಸುರಿಯಲಾಗಿದ್ದು ಎರಡು ಕೋಟಿ ರೂ ವೆಚ್ಚದ ಕಾಮಗಾರಿ ನಿರ್ಮಾಣ ಮಾಡಲು ಲಕ್ಷಾಂತರ ರೂಪಾಯಿಯ ಜಾಲರಿಯನ್ನು ಹಾಳು ಮಾಡಲಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ಶಾಸಕರಿಂದ ತರಾಟೆ: ಶಾಸಕ ಜಿ.ಎಸ್.ಪಾಟೀಲ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕಾಮಗಾರಿಯಲ್ಲಿ ಕಳಪೆ ಕಂಡು ಬಂದಿದ್ದನ್ನು ಗಮನಿಸಿದ್ದ ಶಾಸಕರು ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಇಲ್ಲದಿದ್ದರೇ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಆದರೂ ಗುತ್ತಿಗೆದಾರರಾಗಲೀ ಅಧಿಕಾರಿಗಳಾಗಲೀ ಎಚ್ಚೆತ್ತುಕೊಳ್ಳದೇ ತರಾತುರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದೇ ಕಾಮಗಾರಿ ಪೂರ್ಣಗೊಳಿಸುತ್ತಿರುವುದು ಮೇಲ್ನೊಟಕ್ಕೆ ಕಾಣುತ್ತಿದೆ.
ಗುತ್ತಿಗೆದಾರ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ
‘ಮಾಹಿತಿ ನೀಡುವಂತೆ ಹಾಗೂ ಕಾಮಗಾರಿ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಲು ಕೆ.ಆರ್.ಐ.ಡಿ.ಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಜಾತಾ ಕಾಳೆ ಅವರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿದರೂ ಅವರು ಕರೆ ಸ್ವೀಕರಸಲಿಲ್ಲ’ ಎಂದು ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಾಜು ನಾಯಕ್ ಅಸಮಾಧಾನ ವ್ಯಕ್ತಪಡಿಸಿದರು.
‘ಶಾಸಕರು ಪಟ್ಟಣದ ಕ್ರೀಡಾಪಟುಗಳ ಅನುಕೂಲಕ್ಕಾಗಿ ಈಜುಕೊಳ ನಿರ್ಮಾಣಕ್ಕೆ ಒತ್ತು ನೀಡಿ ಅನುದಾನ ಬಿಡುಗಡೆ ಮಾಡಿದ್ದು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಕ್ರೀಡಾಪಟುಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ತಕ್ಷಣವೇ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.