ADVERTISEMENT

ಉದ್ಯೋಗ ಖಾತ್ರಿ: ಬಿಸಿಲಿನ ತಾಪಕ್ಕೆ ಮಹಿಳೆ ಬಲಿ?

ರೋಣ ತಾಲ್ಲೂಕಿನ ಸವಡಿ ಗ್ರಾಮದಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2019, 12:27 IST
Last Updated 21 ಮೇ 2019, 12:27 IST
ಮೃತ ಮಲ್ಲವ್ವ ಪವಾಡಶೆಟ್ಟಿ ಭಾವಚಿತ್ರ.
ಮೃತ ಮಲ್ಲವ್ವ ಪವಾಡಶೆಟ್ಟಿ ಭಾವಚಿತ್ರ.   

ರೋಣ: ಸಮೀಪದ ಸವಡಿ ಗ್ರಾಮದಲ್ಲಿ ಸೋಮವಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾಗ, ಮಹಿಳೆಯೊಬ್ಬರು ಬಿಸಿಲಿನ ತೀವ್ರ ತಾಪದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಸವಡಿ ಗ್ರಾಮದ ನಿವಾಸಿ ಮಲ್ಲವ್ವ ಶರಣಪ್ಪ ಪವಾಡಶೆಟ್ಟಿ (49) ಮೃತ ಮಹಿಳೆ.

ಸವಡಿ–ರೋಣ ರಸ್ತೆ ಪಕ್ಕದಲ್ಲಿರುವ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾಮಗಾರಿ ನಡೆಯುತ್ತಿತ್ತು. ಮಲ್ಲವ್ವ ಈ ಕೆಲಸದಲ್ಲಿ ತೊಡಗಿದ್ದರು. ಮಧ್ಯಾಹ್ನದ ವೇಳೆಗೆ ಬಿಸಿಲಿನ ಝಳಕ್ಕೆ ಸುಸ್ತಾದ ಅವರು ಕುಸಿದು ಬಿದ್ದರು. ತಕ್ಷಣ ಸಹ ಕೆಲಸಗಾರರು ಅವರಿಗೆ ನೀರು ಕುಡಿಸಿ, ಗ್ರಾಮದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ಆದರೆ, ಆಸ್ಪತ್ರೆಗೆ ತರುವ ಮಾರ್ಗ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದರು.

ADVERTISEMENT

‘ಉದ್ಯೊಗ ಖಾತ್ರಿ ಯೋಜನೆಯಡಿ ನನ್ನ ತಾಯಿ ಕೆಲಸ ಮಾಡುತ್ತಿದ್ದರು. ಬಿಸಿಲಿನ ತಾಪ ಮತ್ತು ಉಸಿರಾಟದ ತೊಂದರೆಯಿಂದ ಅವರು ಮೃತಪಟ್ಟಿದ್ದಾರೆ ಎಂದು ಅವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿ ತಿಳಿಸಿದ್ದಾರೆ’ ಎಂದು ಮೃತ ಮಲ್ಲವ್ವ ಅವರ ಪುತ್ರ ಮಹಾದೇವಪ್ಪ ಪವಾಡಶೆಟ್ಟಿ ತಿಳಿಸಿದರು.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಪ್ರತಿಕ್ರಿಯೆಗಾಗಿ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಪಿಡಿಇ, ತಾಲ್ಲೂಕು ಪಂಚಾಯ್ತಿ ಇಒ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಮತ್ತು ಸಿಇಒ ಅವರನ್ನು ಸಂಪರ್ಕಿಸಲಾಯಿತಾದರೂ, ಯಾರೂ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.