ADVERTISEMENT

ರೋಣ | ರಸ್ತೆ ಅಭಿವೃದ್ಧಿಗೆ ₹ 8 ಕೋಟಿ: ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:23 IST
Last Updated 8 ಫೆಬ್ರುವರಿ 2026, 3:23 IST
ರೋಣ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಶಾಸಕ ಜಿ.ಎಸ್.ಪಾಟೀಲ ಮಾತನಾಡಿದರು
ರೋಣ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಶಾಸಕ ಜಿ.ಎಸ್.ಪಾಟೀಲ ಮಾತನಾಡಿದರು   

ರೋಣ: ‘ಪಟ್ಟಣದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅವಶ್ಯಕ ಕಾಮಗಾರಿಗಳಿಗೆ ಆದ್ಯತೆ ನೀಡಿ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗಿದೆ’ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ ಶನಿವಾರ ಪುರಸಭೆ ವತಿಯಿಂದ 2025-26ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿ ₹ 50.40 ಲಕ್ಷ ವೆಚ್ಚದಲ್ಲಿ ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುಖ್ಯಮಂತ್ರಿಗಳ ಅಭಿವೃದ್ಧಿ ನಿಧಿಯಿಂದ ಬಂದ ₹ 8 ಕೋಟಿಗೂ ಅಧಿಕ ಹಣವನ್ನು ಪಟ್ಟಣದ ಒಳಗಿನ ರಸ್ತೆಗಳ ಅಭಿವೃದ್ಧಿಗಾಗಿ ಹಂಚಿಕೆ ಮಾಡಲಾಗುತ್ತಿದ್ದು, ಎಲ್ಲ ಬಡಾವಣೆಗಳಲ್ಲಿ ಸುಸಜ್ಜಿತ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಅಮೃತ್ ಯೋಜನೆ 2.0 ಈಗಾಗಲೇ ಪ್ರಗತಿಯಲ್ಲಿದ್ದು 7ನೇ ವಾರ್ಡ್‌ವರೆಗೆ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವುದು. ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಿ ಜಿಟಿಟಿಸಿ ಕಾಲೇಜು ಮಂಜೂರು ಮಾಡಿಸಲಾಗಿದೆ. ಕಾಲೇಜಿನ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಹಳೆ ಕಟ್ಟಡವನ್ನು ವಿದ್ಯಾರ್ಥಿಗಳ ವಸತಿ ನಿಲಯವನ್ನಾಗಿ ಪರಿವರ್ತಿಸಲಾಗುವುದು ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಿಥುನ್‌ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷರಾದ ತೋಟಪ್ಪ ನವಲಗುಂದ, ಮುತ್ತಣ್ಣ ಸಂಗಳದ, ರಂಗವ್ವ ಭಜಂತ್ರಿ ಕಾಂಗ್ರೆಸ್ ಮುಖಂಡರಾದ ಬಸವರಾಜ ನವಲಗುಂದ, ಪರಶುರಾಮಪ್ಪ ಅಳಗವಾಡಿ, ವಿ.ಆರ್.ಗುಡಿಸಾಗರ, ಮಲ್ಲಯ್ಯ ಮಹಾಪುರುಷಮಠ, ರಾಜು ಪಲ್ಲೇದ, ದುರಗಪ್ಪ ಹಿರೇಮನಿ, ಹನುಮಂತ ತಳ್ಳಿಕೇರಿ, ನಿಂಗಪ್ಪ ನವಲಗುಂದ, ದಾವಲ್ ಸಾಬ್ ಬಾಡಿನ, ಇನಾಯತ್ ತರಫದಾರ ಮುಂತಾದವರು ಭಾಗವಹಿಸಿದ್ದರು.

ಜಿಲ್ಲೆಗೆ ಏಕಮಾತ್ರ ವಸತಿ ಶಾಲೆ ಗದಗ ಜಿಲ್ಲೆಯಲ್ಲಿ ಏಕ ಮಾತ್ರ ಕಾರ್ಮಿಕ ವಸತಿ ಶಾಲೆ ರೋಣದಲ್ಲಿ ಪ್ರಾರಂಭಿಸಲು ಈಗಾಗಲೇ ಮಂಜೂರಾತಿ ದೊರೆತಿದ್ದು ₹ 38 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಶಾಸಕ ಜಿ.ಎಸ್‌.ಪಾಟೀಲ ಹೇಳಿದರು. ‘ಶಾಲೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗೆ ₹ 10 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಯೋಜಿಸಲಾಗಿದ್ದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ತೆರೆಯಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜೊತೆಗೆ ಪಟ್ಟಣದ ಆರು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಪಟ್ಟಣ ಪ್ರವೇಶಿಸುವ ನಾಲ್ಕು ರಸ್ತೆಗಳಲ್ಲಿ ಸ್ವಾಗತ ಕಮಾನು ನಿರ್ಮಾಣದ ಜೊತೆಗೆ ಕೆರೆ ಅಭಿವೃದ್ಧಿಗೆ ಅನುದಾನ ಮಂಜೂರಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.