ADVERTISEMENT

ಜಿಲ್ಲಾಡಳಿತದಿಂದ ಸಬ್ಸಿಡಿ ದರದಲ್ಲಿ ಮರಳು ಮಾರಾಟ

ಗದಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ; 50 ಕೆ.ಜಿ ಮರಳಿಗೆ ₹ 75

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 14:11 IST
Last Updated 23 ಜೂನ್ 2018, 14:11 IST
ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ 50 ಕೆ.ಜಿ ತೂಕದ ಮರಳಿನ ಚೀಲವನ್ನು ಪ್ರದರ್ಶಿಸಿದರು
ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ 50 ಕೆ.ಜಿ ತೂಕದ ಮರಳಿನ ಚೀಲವನ್ನು ಪ್ರದರ್ಶಿಸಿದರು   

ಗದಗ:ಬಡವರಿಗೆ ಹಾಗೂ ಆಶ್ರಯ ಮನೆ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ನೇರವಾಗಿ ಮರಳು ಮಾರಾಟ ಮಾಡುವ ಯೋಜನೆಯನ್ನು ಗದಗ ಜಿಲ್ಲಾಡಳಿತ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.

‘ಜಿಲ್ಲೆಯ ನದಿಪಾತ್ರದಿಂದ ಸಂಗ್ರಹಿಸಿದ ಮರಳನ್ನು ಸಂಸ್ಕರಿಸಿ ನಿರ್ಮಿತಿ ಕೇಂದ್ರದ ಮೂಲಕ ಮಾರಾಟ ಮಾಡಲಾಗುವುದು. 50 ಕೆ.ಜಿ ತೂಕದ ಮರಳಿನ ಚೀಲಕ್ಕೆ ₹ 75 ದರ ನಿಗದಿಪಡಿಸಲಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ಮತ್ತು ಆಶ್ರಯ ಮನೆ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಡವರಿಗೆ ಅಗ್ಗದ ದರದಲ್ಲಿ, ಸುಲಭವಾಗಿ, ಶುದ್ಧ ಮರಳು ಸಿಗಬೇಕು ಎನ್ನುವುದು ಜಿಲ್ಲಾಡಳಿತದ ಆಶಯ. ಭಾನುವಾರದಿಂದಲೇ (ಜೂನ್‌ 24) ಜಿಲ್ಲಾ ಕೇಂದ್ರದಲ್ಲಿ ಮಾರಾಟ ಪ್ರಾರಂಭವಾಗಲಿದೆ. ನಂತರ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಗುವುದು. ಗ್ರಾಹಕರು, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಮತ್ತು ಆಧಾರ್‌ ಸಂಖ್ಯೆ ನೀಡಿ ಮರಳು ಖರೀದಿಸಬಹುದು. ಖಾಸಗಿ ಬಳಕೆಗಾಗಿ ಖರೀದಿಸುವವರಿಗೆ ಸಬ್ಸಿಡಿ ಇಲ್ಲ. ಅಂತಹ ಗ್ರಾಹಕರಿಗೆ 50 ಕೆ.ಜಿ ಮರಳಿಗೆ ₹ 125 ದರ ನಿಗದಿಪಡಿಸಲಾಗಿದೆ’ ಎಂದರು.

‘ಸಬ್ಸಿಡಿ ದರದಲ್ಲಿ ಜಿಲ್ಲಾಡಳಿತವೇ ನೇರವಾಗಿ ಮರಳು ಮಾರಾಟ ಮಾಡುವ ಯೋಜನೆ ದೇಶದಲ್ಲೇ ಮೊದಲು. ಇದು ಯಶಸ್ವಿಯಾದರೆ ರಾಜ್ಯದಾದ್ಯಂತ ಜಾರಿಗೆ ತರಬಹುದು’ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.