ADVERTISEMENT

ಬಯಲಾಟ ಕಲೆ ಉಳಿವಿಗೆ ಶ್ರಮಿಸಿ

ಮೂಡಲಪಾಯ ಬಯಲಾಟಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಸಂಕನೂರ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 16:57 IST
Last Updated 4 ಜನವರಿ 2021, 16:57 IST
ಬೆಟಗೇರಿಯ ಕಾಳಿಕಾದೇವಿ ದೇವಾಲಯದ ಸಭಾ ಭವನದಲ್ಲಿ ನಡೆದ ಮೂಡಲಪಾಯ ಬಯಲಾಟಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ.ಸಂಕನೂರ ಉದ್ಘಾಟಿಸಿದರು.
ಬೆಟಗೇರಿಯ ಕಾಳಿಕಾದೇವಿ ದೇವಾಲಯದ ಸಭಾ ಭವನದಲ್ಲಿ ನಡೆದ ಮೂಡಲಪಾಯ ಬಯಲಾಟಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ.ಸಂಕನೂರ ಉದ್ಘಾಟಿಸಿದರು.   

ಗದಗ: ‘ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪೌರಾಣಿಕ ಕಥೆಗಳ ಮೂಲಕ ಪ್ರಚಾರಗೊಳಿಸುವ ಉತ್ತರ ಕರ್ನಾಟಕದ ಗಂಡು ಕಲೆಯಾದ ಮೂಡಲಪಾಯ ಬಯಲಾಟ ಉಳಿಯಬೇಕು. ಮುಂದಕ್ಕೂ ಬೆಳೆಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ.ಸಂಕನೂರ ಅಭಿಪ್ರಾಯಪಟ್ಟರು.

ಬೆಟಗೇರಿಯ ಕಾಳಿಕಾದೇವಿ ದೇವಾಲಯದ ಸಭಾಭವನದಲ್ಲಿ ಸುತಾರ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಮೂಡಲಪಾಯ ಬಯಲಾಟಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಮದ್ದಳೆ ನುಡಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದಿನ ಕಾಲದಲ್ಲಿ ಜಾನಪದ ಬಯಲಾಟಗಳು, ಜಾತ್ರೆ, ಉತ್ಸವ ಸಂದರ್ಭಗಳಲ್ಲಿ ಪ್ರತಿ ಗ್ರಾಮಗಳಲ್ಲಿ ವರ್ಷದಲ್ಲಿ ಎರಡು–ಮೂರು ಬಾರಿ ನಡೆದು ಗ್ರಾಮೀಣ ಭಾಗದ ಕಲಾವಿದರಿಗೆ ಪ್ರೋತ್ಸಾಹ, ಮನರಂಜನೆ ದೊರೆಯುತ್ತಿತ್ತು. ಆದರೆ, ಇತ್ತೀಚೆಗೆ ಸಿನಿಮಾ ಮತ್ತು ಟಿ.ವಿ ಹಾವಳಿಯಿಂದ ಜೀವಂತ ಕಲೆಯಾದ ನಾಟಕ ಮತ್ತು ಬಯಲಾಟಗಳು ಅಪರೂಪವಾಗುತ್ತಿವೆ. ಗ್ರಾಮೀಣ ಭಾಗದ ಹಿರಿಯ ಕಲಾವಿದರು ಅಮೂಲ್ಯ ಕಲೆ ನಶಿಸಿ ಹೋಗದಂತೆ ಮುಂದಿನ ಜನಾಂಗಕ್ಕೆ ತರಬೇತಿ ನೀಡುವ ಮೂಲಕ ಜೀವಂತವಾಗಿ ಇಡಬೇಕು’ ಎಂದರು.

ADVERTISEMENT

‘ಮುಂಬರುವ ಬಜೆಟ್‍ನಲ್ಲಿ ಬಯಲಾಟ ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಗಮನಸೆಳೆದು, ಒತ್ತಡಹಾಕಿ ಜಾನಪದ ಕಲಾವಿದರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ಮೂಡಲಪಾಯ ಬಯಲಾಟಗಳ ಸಾಂಸ್ಕೃತಿಕ ಕೊಡುಗೆ’ ಕುರಿತು ಕಲಾ ವಿಮರ್ಶಕ ದತ್ತಪ್ರಸನ್ನ ಪಾಟೀಲ ವಿಶೇಷ ಉಪನ್ಯಾಸ ನೀಡಿ, ‘ಯಕ್ಷಗಾನ ಕಲೆಗೆ ಇರುವಷ್ಟೇ ಮಹತ್ವ ಬಯಲಾಟ ಕಲೆಗೂ ಇದೆ. ಉತ್ತರ ಕರ್ನಾಟಕದ ಜಾನಪದದ ಸೊಗಡನ್ನು ಬಿಂಬಿಸುವ ಬಯಲಾಟ ಕಲೆ ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತವಾಗದೇ ನಗರಗಳಲ್ಲಿಯೂ ಪ್ರದರ್ಶನಗೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ನರಗುಂದದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಮೂಡಲಪಾಯ ಬಯಲಾಟ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಂಗಮ್ಮ ಕಾಡದೇವರ ಮಠ ಅವರಿಗೆ ‘ಜಾನಪದಕೋಗಿಲೆ ಸಿರಿ’, ಭರಮಪ್ಪ ಮಳ್ಳೂರ ಅವರಿಗೆ ‘ಜಾನಪದಸಿರಿ’, ನಿಂಗಪ್ಪ ಕೊಂಗವಾಡಗೆ ‘ಬಯಲಾಟಸಿರಿ’, ಭರಮಪ್ಪ ಕಿತ್ತೂರಗೆ ‘ಜಾನಪದಸಿರಿ’ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಅಡಿವಯ್ಯಸ್ವಾಮಿ ಹಿರೇಮಠ ಹಾಗೂ ಸಂಗಡಿಗರು ದೊಡ್ಡಾಟ ಪದಗಳನ್ನು, ಗುರು ಕಲ್ಮೇಶ್ವರ ದೊಡ್ಡಾಟ ಮಂಡಳಿಯ ವೀರನಗೌಡ ಪಾಟೀಲ ಹಾಗೂ ಸಂಗಡಿಗರು, ಹಿರೇವಡ್ಡಟ್ಟಿಯ ವಾಲ್ಮೀಕಿ ಕಲಾ ಸಂಘದ ಮಂಜುನಾಥ ಗುಂಡಿಕೇರಿ ಹಾಗೂ ಸಂಗಡಿಗರು, ಮುಂಡರಗಿ ಮಾರುತೇಶ್ವರ ದೊಡ್ಡಾಟ ಕಲಾಸಂಘದ ಅಂದಪ್ಪ ಹಂದ್ರಾಳ ಸಂಗಡಿಗರು, ಮೂಡಲಪಾಯ ಬಯಲಾಟಗಳು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಪ್ರಿಯಾಂಕಾ ಕೊಂಗವಾಡ ಡೊಳ್ಳಿನ ಪದಗಳನ್ನು, ಗಂಗಮ್ಮ ಕಾಡದೇವರಮಠ ಹಾಗೂ ಸಂಗಡಿಗರು ಸೋಬಾನೆ ಪದಗಳನ್ನು ಸಂಕಣ್ಣ ಗುಡಿಸಲ ಹಾಗೂ ಸಂಗಡಿಗರು ಜಾನಪದ ನೃತ್ಯಗಳನ್ನು ಪ್ರಸ್ತುತಪಡಿಸಿರು. ನಂತರ ಯಾವಗಲ್ಲಿನ ಶಾಂಭವಿ ಯುವಕ ಮಂಡಳ ನಾಟ್ಯ ಸಂಘದವರು ಚೆನ್ನಬಸಯ್ಯ ಕಾಡದೇವರಮಠ ನೇತೃತ್ವದಲ್ಲಿ ‘ಸೀತಾಪಹರಣ’ ಬಯಲಾಟ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.