
ಗದಗ: ‘ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್‌ಗಳು ನಿಗದಿತ ಅವಧಿಯಲ್ಲಿ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು. ಇಲ್ಲವಾದರೆ, ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ ಹೇಳಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ (ಪಿಸಿ ಮತ್ತು ಪಿಎನ್‌ಡಿಟಿ) ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಗದಗ ಜಿಲ್ಲೆಯಲ್ಲಿ ಒಟ್ಟು 72 ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಸ್ಕ್ಯಾನಿಂಗ್ ಸೆಂಟರ್‌ನವರು ಪಿ.ಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಅಡಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕಿರುವುದು ಕಡ್ಡಾಯ’ ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ.ಕೆ.ಭಜಂತ್ರಿ ಮಾತನಾಡಿ, ‘ಪಿ.ಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಗರ್ಭಧಾರಣೆಗೆ ಬಾಲ್ಯ ವಿವಾಹ ಪ್ರಮುಖ ಕಾರಣವಾಗಿದ್ದು, ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟವರಿಗೆ ತಕ್ಷಣವೇ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
‘ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆಯು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯ ವಿವಾಹ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ಇಲ್ಲದಿರುವುದರಿಂದ ಚಿಕ್ಕವಯಸ್ಸಿನಲ್ಲೇ ಗರ್ಭಧಾರಣೆ ಆಗುತ್ತಿವೆ. ಗರ್ಭಪಾತ ಮಾಡಲು ಆಸ್ಪತ್ರೆಗಳು ಸಮಗ್ರ ಗರ್ಭಪಾತ ಸೇವೆಗಳ ಕಾರ್ಯಕ್ರಮದಡಿ (ಎಂಟಿಪಿ) ಕಡ್ಡಾಯವಾಗಿ ನೋಂದಾಯಿಸಿರಬೇಕು’ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳ ನೋಂದಣಿ, ನವೀಕರಣ ಹಾಗೂ ಸ್ಕ್ಯಾನಿಂಗ್ ಸೆಂಟರ್ ಪ್ರಾರಂಭಿಸಲು ಹೊಸ ಯಂತ್ರ ಖರೀದಿ, ಸ್ಕ್ಯಾನಿಂಗ್ ಸೆಂಟರ್‌ಗೆ ಹೆಚ್ಚುವರಿಯಾಗಿ ಸ್ಕ್ಯಾನಿಂಗ್ ಯಂತ್ರ ಖರೀದಿಸಲು ಬಂದ ಅರ್ಜಿಗಳಿಗೆ ಅನುಮತಿ ಕುರಿತಂತೆ ಚರ್ಚಿಸಲಾಯಿತು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ, ಡಾ.ಸಂತೋಷ ಹುಯಿಲಗೋಳ, ಡಾ. ವಿಶ್ವನಾಥ ಕುಲಕರ್ಣಿ, ಡಾ.ರಾಜಶೇಖರ ಪಾಟೀಲ, ಡಾ. ಶ್ರುತಿ ಪಾಟೀಲ, ಫಕೀರಮ್ಮ ಲಕ್ಕುಂಡಿ ಸೇರಿದಂತೆ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಸ್ಕ್ಯಾನಿಂಗ್ ಸೆಂಟರ್‌ನವರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಪಾಲಿಸದ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸದ ಕೇಂದ್ರಗಳನ್ನು ಮುಲಾಜಿಲ್ಲದೇ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದುಡಾ. ಎಸ್.ಎಸ್.ನೀಲಗುಂದ ಡಿಎಚ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.