ಮುಂಡರಗಿ: 'ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗಾಗಿ ಸ್ಕ್ಯಾನಿಂಗ್ ಘಟಕವನ್ನು ಆರಂಭಿಸಲಾಗಿದ್ದು, ಪ್ರತಿ ಬುಧವಾರ ಬೆಳಿಗ್ಗೆ 10ರಿಂದ 1ರವರೆಗೆ ಗರ್ಭಿಣಿಯರಿಗೆ ಮಾತ್ರ ಸ್ಕ್ಯಾನಿಂಗ್ ಮಾಡಲಾಗುವುದು. ಜಿಲ್ಲೆಯಲ್ಲಿ ಇದೊಂದು ವಿನೂತನ ಪ್ರಯೋಗವಾಗಿದ್ದು, ಮುಂಡರಗಿ ಆಸ್ಪತ್ರೆಗೆ ಮಾತ್ರ ಸ್ಕ್ಯಾನಿಂಗ್ ಘಟಕ ನಿಡಲಾಗಿದೆ. ಇಲ್ಲಿಯ ಮಹಿಳೆಯರು ಅದರ ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಮುಂಡರಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರುವ ಗರ್ಭಿಣಿಯರ ಉಚಿತ ಸ್ಕ್ಯಾನಿಂಗ್ ಘಟಕವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಯಿಲೆ ಬಂದ ನಂತರ ಪರಿತಪಿಸುವುದಕ್ಕಿಂತ ಕಾಯಿಲೆ ಬಾರದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ತಿಳಿಸಿದರು.
ತಾಲ್ಲೂಕು ಆಸ್ಪತ್ರೆಯ ಹಿರಿಯ ವೈದ್ಯ ಡಾ.ಲಕ್ಷ್ಮಣ ಪೂಜಾರ ಮಾತನಾಡಿ, ‘ಇಲ್ಲಿಯ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ತಜ್ಞರು ಇಲ್ಲದ್ದರಿಂದ ಈಗ ವಾರಕೊಮ್ಮೆ ಮಾತ್ರ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಸರ್ಕಾರವು ಸ್ಕ್ಯಾನಿಂಗ್ ತಜ್ಞರನ್ನು ನೀಡಿದರೆ, ನಿತ್ಯ ಸ್ಕ್ಯಾನಿಂಗ್ ಮಾಡಲಾಗುವುದು. ಸದ್ಯ ನುರಿತ ವೈದ್ಯರು ಹಾಗೂ ಸ್ತ್ರೀ ರೋಗ ತಜ್ಞರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುವುದು’ ಎಂದು ತಿಳಿಸಿದರು.
ಮುಂಡರಗಿ ಬಿಜೆಪಿ ಮಂಡಳದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಡಾ.ಅಂಜುಮಾ.ಕೆ., ಡಾ.ಶಮೀವುಲ್ಲಾ, ಡಾ.ಕೀರ್ತಿಹಾಸ, ಮಂಗಳಾ ಸಜ್ಜನರ, ರವಿ ಲಮಾಣಿ, ಮೈಲಾರಪ್ಪ ಕಲಕೇರಿ, ಪ್ರಶಾಂತ ಗುಡದಪ್ಪನವರ, ಆರ್.ಎಸ್.ಪಾಟೀಲ, ಶಿವನಗೌಡ ಗೌಡ್ರ, ಅರುಣಾ ಪಾಟೀಲ, ಪವಿತ್ರಾ ಕಲ್ಲಕುಟಗರ, ಜ್ಯೋತಿ ಹಾನಗಲ್, ರಮೇಶ ಹುಳಕಣ್ಣನವರ, ಅಶೋಕ ಚೂರಿ, ಶ್ರೀನಿವಾಸ ಅಬಿಗೇರಿ, ರಂಗಪ್ಪ ಕೋಳಿ, ಗಿರೇಶ ಶೀರಿ, ಬಸವರಾಜ ಚಿಕ್ಕನ್ಣವರ, ಅಂಬವ್ವ ಕಟ್ಟಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.