ADVERTISEMENT

ಗದಗ: ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಕಾಳಜಿ ವಹಿಸಿ – ಬಿ. ಎಸ್. ಗೌಡರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:50 IST
Last Updated 28 ಜನವರಿ 2026, 7:50 IST
ನರೇಗಲ್‌ ಪಟ್ಟಣದಲ್ಲಿ ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರರ ಸಂಘದ 12ನೇ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ನರೇಗಲ್‌ ಪಟ್ಟಣದಲ್ಲಿ ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರರ ಸಂಘದ 12ನೇ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ನರೇಗಲ್: ‘ನಿವೃತ್ತರಾದ ತಕ್ಷಣ ನಮ್ಮ ಜೀವನ ಮುಗಿದಂತಲ್ಲ. ನಾವಿನ್ನೂ ಹೆಚ್ಚು ಕ್ರಿಯಾಶೀಲರಾಗಿ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕೆ ನಾವು ಸೋಮರಿತನವನ್ನು ತೊರೆಯಬೇಕು’ ಎಂದು ನಿವೃತ್ತ ಡಿಡಿಪಿಯು ನಿರ್ದೇಶಕ ಬಿ. ಎಸ್. ಗೌಡರ ಹೇಳಿದರು.

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಭಾನುವಾರ ನಡೆದ ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರ ಸಂಘದ 12ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಈಗಿನ ದಿನಗಳಲ್ಲಿ ಹಿರಿಯರು ನಿಶ್ಚಿಂತರಾಗಿರಬೇಕು. ಚಿಂತೆಯನ್ನು ಹಚ್ಚಿಕೊಂಡರೆ ಜೀವನಕ್ಕೆ ಬೇಗ ಮುಪ್ಪು ಆವರಿಸುತ್ತದೆ. ಆಗುವುದು ಆಗಿಯೇ ಆಗುತ್ತದೆ ಎನ್ನುವ ನಂಬಿಕೆಯನ್ನು ಇಟ್ಟುಕೊಂಡು ಜೀವನ ಸಾಗಿಸಬೇಕು. ಹಿರಿಯರಾಗಿ ಮನೆಯಲ್ಲಿನ ಮೊಮ್ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಯತ್ನಿಸಬೇಕು ಎಂದರು.

ADVERTISEMENT

ರಾಜ್ಯ ನಿವೃತ್ತ ಸಂಘದ ನಿರ್ದೇಶಕ ರಾಜಶೇಖರ ಕರಡಿ ಮಾತನಾಡಿ, ನಿವೃತ್ತ ನೌಕರರ ಸೌಲಭ್ಯಗಳ ಬಗ್ಗೆ ವಿವರಿಸಿದರು. ಕಮ್ಯುಟೇಷನ್‌ನ ಅವಧಿಯನ್ನು 15 ವರ್ಷಗಳಿಂದ 10 ವರ್ಷ 8 ತಿಂಗಳಿಗೆ ಬೇರೆ ರಾಜ್ಯಗಳಲ್ಲಿ ಕಡಿತಗೊಳಿಸಿರುವ ಬಗ್ಗೆ ವಿವರಿಸಿದ ಅವರು ಇದು ನಮ್ಮ ರಾಜ್ಯದಲ್ಲಿಯೂ ಬೇಗನೆ ಬರಲಿದೆ ಎಂದರು. ಸನ್ಮಾನ ಸ್ವೀಕರಿಸಿ ಎನ್. ಎಚ್. ಮಾಸರೆಡ್ಡಿ ಮತ್ತು ಮುತ್ತಣ್ಣ ಪಲ್ಲೇದ ಮಾತನಾಡಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಮನೆಯಲ್ಲಿ ಹಿರಿಯರಿರುವುದು ಗೌರವದ ವಿಷಯವೆ. ಇದನ್ನು ಮಕ್ಕಳು ಅರ್ಥ ಮಡಿಕೊಂಡು ನಿವೃತ್ತರು ಎಂದು ಅಸಡ್ಡೆ ಮಾಡದೆ ಅವರನ್ನು ಜೋಪಾನ ಮಾಡಬೇಕು. ಮಕ್ಕಳು ಚಿಕ್ಕವರಿದ್ದಾಗ ತಂದೆತಾಯಿಗಳು ಅವರನ್ನು ಸಾಕಿ ಸಲುಹಿರುತ್ತಾರೆ. ವಯಸ್ಸಾದ ಮೇಲೆ ಅವರೂ ಸಹ ಮಕ್ಕಳು ಎಂದು ತಿಳಿದು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಕಾಳಜಿ ಮಾಡಬೇಕು ಎಂದರು.

ಗೌರವಾಧ್ಯಕ್ಷ ಸಿ. ವಿ. ವಂಕಲಕುಂಟಿ, ಅಧ್ಯಕ್ಷ ಡಿ. ಎ, ಅರವಟಗಿಮಠ ಮಾತನಾಡಿದರು. ಸಭೆಯಲ್ಲಿ ಎಂ. ಎ. ಹಿರೆವಡೆಯರ, ಕೆ. ಕೆ. ದಾಸರ, ಬಿ. ವಿ. ಬಳಿಗೇರ, ಎಸ್. ಜಿ. ಮಾಳಗೌಡ್ರ, ಜಿ. ಎ. ಬೆಲ್ಲದ, ಜಿ. ಎಸ್. ಹಿರೆವಡೆಯರ, ಎಸ್. ಆರ್. ಬಾಗಲಿ, ಎಫ್. ಬಿ. ಧರ್ಮಾಯತ, ಬಸಪ್ಪ ಉಪ್ಪಿನ, ವೈ. ಆರ್. ಬಸಾಪೂರ, ಆರ್. ಕೆ. ಗಚ್ಚಿನಮಠ, ವಿ. ಎಸ್. ಕೊಟಗಿ, ಸಿ. ಎ. ಅಂಗಡಿ, ಎ. ಎಚ್. ಬೇವಿನಕಟ್ಟಿ, ಎಚ್. ಕೆ. ಜೋಗಿ, ವಿ. ಬಿ. ಮೇಟಿ, ವೀರಭದ್ರಪ್ಪ ಕೆರಿಯವರ, ಅರುಣ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.