
ಗದಗ: ‘ಈಗಿನ ಮಕ್ಕಳು ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಮಕ್ಕಳಿಗೆ ಬೇಕಾಗಿರುವ ಸಂಸ್ಕೃತಿ, ಸಂಸ್ಕಾರಗಳನ್ನು ಒಳಗೊಂಡಿರುವ ಸಾಹಿತ್ಯವನ್ನು ಪೋಷಕರು ನೀಡಬೇಕು’ ಎಂದು ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಳಗಾನೂರಿನ ಚನ್ನವೀರ ಶರಣರ ಮಠದ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
‘ಈ ನಿಟ್ಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಪ್ರಣತಿ ಗಡಾದ ಅವರ ಸಾಧನೆ ಅಮೋಘವಾಗಿದ್ದು, ಬರಲಿರುವ ದಿನಗಳಲ್ಲಿ ಆಕೆಗೆ ಉತ್ತಮ ಅವಕಾಶಗಳು ಸಿಗಲಿ’ ಎಂದು ಹೇಳಿದರು.
ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ, ‘ಪ್ರತಿಭಾವಂತ ಬಾಲಕಿ ಪ್ರಣತಿ ಗಡಾದ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಜಿಲ್ಲೆಯ ಕೀರ್ತಿಯನ್ನು ಎತ್ತರಕ್ಕೇರಿಸಿದೆ’ ಎಂದರು.
ಜಿಲ್ಲಾ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಪ್ರಣತಿ ಗಡಾದ ಮಾತನಾಡಿ, ‘ಪೋಷಕರು ಮಕ್ಕಳಿಗೆ ಪ್ರೀತಿ, ವಿಶ್ವಾಸ ತೋರಿಸಬೇಕು. ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿ, ಆತ್ಮವಿಶ್ವಾಸ ತುಂಬಬೇಕು. ಮೂಢನಂಬಿಕೆ ಹೋಗಲಾಡಿಸಿ, ವೈಚಾರಿಕತೆ ಬೆಳೆಸಬೇಕು. ಉತ್ತಮ ಮೌಲ್ಯಗಳನ್ನು ಕಲಿಸಿ, ಪ್ರೋತ್ಸಾಹಿಸಬೇಕು’ ಎಂದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಸಮ್ಮೇಳನದ ಸರ್ವಾಧ್ಯಕ್ಷೆ ಪ್ರಣತಿ ಗಡಾದ ಅವರನ್ನು ವಚನ ಗಂಟುಗಳ ಹೊತ್ತ ಮಕ್ಕಳ ಸಮೂಹ ಹೂಮಳೆ ಗೆರೆಯುತ್ತಾ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದರು.
ಚಿಕೇನಕೊಪ್ಪದ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು ನೇತೃತ್ವ ವಹಿಸಿದ್ದರು. ನಯನಾ ಅಳವಂಡಿ ವಚನ ಗಾಯನ ಪ್ರಸ್ತುತಪಡಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ.ಬಳಿಗೇರ ಸ್ವಾಗತಿಸಿದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿದರು. ಬಾಲ ಸಾಹಿತಿ ಸಾಕ್ಷಿ ದೇವರೆಡ್ಡಿ ಪ್ರತಿಭಾಧ್ವನಿ ಬಿಡುಗಡೆ ಮಾಡಿದರು.
ವಿಶ್ರಾಂತ ಡಿಡಿಪಿಐ ಎನ್.ನಾಗರಹಳ್ಳಿ, ಎಸ್.ಡಿ.ಗಾಂಜಿ, ಐ.ಬಿ.ಬೆನಕೊಪ್ಪ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಗಾಂಜಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಂದ್ರ ಗಡಾದ, ಶರಣಬಸವ ವೆಂಕಟಾಪುರ, ಎ.ಓ.ಪಾಟೀಲ್, ಶಿವಪ್ರಕಾಶ್ ಮಾಹಜನಶೆಟ್ಟರ್ ಇದ್ದರು.
ಜಿಲ್ಲೆಯು ಶರಣ ಪರಂಪರೆಗೆ ಹಿರಿದಾದ ಕೊಡುಗೆ ನೀಡಿದೆ. ಮಕ್ಕಳನ್ನು ಸಂವೇದನಾಶೀಲ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇವು ಮಾರ್ಗದರ್ಶಿಯಾಗಿವೆ.-ಪ್ರಣತಿ ಗಡಾದ ಜಿಲ್ಲಾ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.