ADVERTISEMENT

ಲಕ್ಷ್ಮೇಶ್ವರ | ರೇಷ್ಮೆ ಕೃಷಿಯಲ್ಲಿ ಶಾಂತವ್ವ ಸಾಧನೆ

ಜಮೀನಿನಲ್ಲಿಯೆ ಎರೆಹುಳು ಗೊಬ್ಬರ ತಯಾರಿಸಿ ಕೃಷಿಗೆ ಬಳಕೆ

ನಾಗರಾಜ ಎಸ್‌.ಹಣಗಿ
Published 30 ಜನವರಿ 2026, 5:09 IST
Last Updated 30 ಜನವರಿ 2026, 5:09 IST
ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕುತ್ತಿರುವ ಶಾಂತವ್ವ ಈಳಿಗೇರ
ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕುತ್ತಿರುವ ಶಾಂತವ್ವ ಈಳಿಗೇರ   

ಲಕ್ಷ್ಮೇಶ್ವರ: ನಿರಂತರ ಕೃಷಿ ತೊಡಗಿಸಿಕೊಂಡಿರುವ ಲಕ್ಷ್ಮೇಶ್ವರ ತಾಲ್ಲೂಕು ಉಂಡೇನಹಳ್ಳಿ ಗ್ರಾಮದ ಶಾಂತವ್ವ ಹನಮಂತಪ್ಪ ಈಳಗೇರ ಅವರು ರೇಷ್ಮೆ ಬೆಳೆದು ಲಾಭ ಮಾಡಿಕೊಳ್ಳುತ್ತಿದ್ದಾರೆ.

ಕಳೆದ 12 ವರ್ಷಗಳಿಂದ ಕುಟುಂಬದ ಸದಸ್ಯರ ಸಹಕಾರದೊಂದಿಗೆ ರೇಷ್ಮೆ ಕೃಷಿಯಲ್ಲಿ ನಿರತರಾಗಿದ್ದಾರೆ. 2011ರಲ್ಲಿ ರೇಷ್ಮೆ ಕೃಷಿ ಬೆಳೆಯಲು ಆರಂಭಿಸಿದ ಅವರು ಈಗಲೂ ಅದನ್ನು ಕೈ ಬಿಟ್ಟಿಲ್ಲ. ಒಟ್ಟು 12 ಎಕರೆ ಹೊಲದ ಪೈಕಿ ಒಂದೂವರೆ ಎಕರೆಯಲ್ಲಿ ರೇಷ್ಮೆ ಕೃಷಿ ಕೈಗೊಂಡಿದ್ದಾರೆ. ಬೆಳಗಾಗುವುದೇ ತಡ ರೇಷ್ಮೆ ಹುಳುಗಳ ಚಾಕರಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ರೇಷ್ಮೆ ಕೃಷಿ ನಿರಂತರ ಶ್ರಮ ಬೇಡುವ ಕೆಲಸ. ಎಷ್ಟು ಆಳಿದ್ದರೂ ಕಡಿಮೆಯೇ. ಶಾಂತವ್ವ ಅವರ ಗಂಡು ಮಕ್ಕಳು, ಸೊಸೆಯಂದಿರು ಇವರ ಕೆಲಸದಲ್ಲಿ ಕೈ ಜೋಡಿಸಿದ್ದರಿಂದ ರೇಷ್ಮೆ ಕೃಷಿಯಿಂದ ಇವರು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಸಧ್ಯ 140 ಲಿಂಕ್ಸ್ ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದು ಅದರಿಂದ 80 ಸಾವಿರ ಲಾಭ ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಿಂಗಳಿಗೊಮ್ಮೆ ಶಿರಹಟ್ಟಿ, ರಾಮನಗರ ಅಥವಾ ಶಿಡ್ಲಘಟ್ಟಗಳ ಮಾರುಕಟ್ಟೆಯಲ್ಲಿ ಗೂಡು ಮಾರಾಟ ಮಾಡುತ್ತಾರೆ. ಪ್ರತಿ ತಿಂಗಳು ರೇಷ್ಮೆಯಿಂದ ಕನಿಷ್ಠ ₹50 ಸಾವಿರ ಇವರ ಕೈ ಸೇರುತ್ತಿದೆ. ರೇಷ್ಮೆ ಕೃಷಿಯಲ್ಲಿ ನಿರಂತರತೆ ಕಾಯ್ದುಕೊಂಡಿರುವ ಶಾಂತವ್ವ ಅವರಿಗೆ 2019-20ರಲ್ಲಿ ತಾಲ್ಲೂಕುಮಟ್ಟದ ಉತ್ತಮ ಕೃಷಿ ಮಹಿಳೆ ಪ್ರಶಸ್ತಿ ಮತ್ತು 2025-26ನೇ ಸಾಲಿನಲ್ಲಿ ಜಿಲ್ಲಾ ಉತ್ತಮ ಕೃಷಿ ಮಹಿಳೆ ಲಭಿಸಿದ್ದು ಇವರ ಸಾಧನೆಗೆ ಸಾಕ್ಷಿಯಾಗಿದೆ.

ADVERTISEMENT

ಇನ್ನು ಶಾಂತವ್ವ ರೇಷ್ಮೆಯೊಂದಿಗೆ 150 ತೆಂಗು, ಕರಿಬೇವು, ಪೇರಲ, 8 ಕುರಿ, 20 ಕೋಳಿ, ಗೀರ್ ತಳಿಯ ನಾಲ್ಕು ಆಕಳುಗಳ ಸಾಕಾಣಿಕೆಯನ್ನು ಕೈಗೊಂಡಿದ್ದಾರೆ. ಇವರ ಹಿರಿಯ ಪುತ್ರ ಚಂದ್ರಶೇಖರ ಕೂಡ ಕೃಷಿಯಲ್ಲಿ ಉತ್ಸುಕರಾಗಿದ್ದು ತಾಯಿಯೊಂದಿಗೆ ಒಕ್ಕಲುತನ ಮಾಡುತ್ತಿದ್ದಾರೆ. ಹೊಲದಲ್ಲಿಯೇ ಎರೆಹುಳು ಗೊಬ್ಬರ ತಯಾರಿಸಿ ಅದನ್ನೇ ಬೆಳೆಗಳಿಗೆ ಬಳಸುತ್ತಾರೆ. ಅಲ್ಲದೆ ಹೆಚ್ಚಾದ ಗೊಬ್ಬರವನ್ನು ಬೇರೆ ರೈತರಿಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ. ಕೃಷಿಹೊಂಡ ನಿರ್ಮಿಸಿಕೊಂಡಿದ್ದು ಬೇಸಿಗೆಯಲ್ಲಿ ಈ ನೀರಿನಿಂದ ಕೃಷಿ ಮಾಡುತ್ತಾರೆ.

‘12 ವರ್ಷಗಳಿಂದ ರೇಷ್ಮಿ ಬೆಳ್ಯಾಕತ್ತೇವ್ರೀ. ಅದರಿಂದ ಚಲೋ ಲಾಭಾನೂ ಬರತೈತಿ. ಹಿಂಗಾಗಿ ಇದನ್ನು ನಾವು ಕೈ ಬಿಟ್ಟಿಲ್ಲ’ ಎಂದು ಶಾಂತವ್ವ ಖುಷಿಯಿಂದ ಹೇಳುತ್ತಾರೆ.

‘ರೈತರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಸಮಗ್ರ ಕೃಷಿ ಅಳವಡಿಸಿಕೊಂಡಾಗ ಮಾತ್ರ ಅದರಿಂದ ಲಾಭ ಬರುತ್ತದೆ. ನಾವು ರೇಷ್ಮೆಯೊಂದಿಗೆ ಇನ್ನಿತರ ಬೆಳೆಗಳನ್ನೂ ಬೆಳೆಯುತ್ತಿದ್ದೇವೆ’ ಎಂದು ಶಾಂತವ್ವ ಅವರ ಮಗ ಚಂದ್ರಶೇಖರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.