
ಶಿರಹಟ್ಟಿಯ ಬಸ್ ನಿಲ್ದಾಣದಲ್ಲಿ ಎಬಿವಿಪಿ ವತಿಯಿಂದ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು
ಶಿರಹಟ್ಟಿ: ಸಾರಿಗೆ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸೋಮವಾರ ಬಸ್ ನಿಲ್ದಾಣ ಬಂದ್ ಹಾಗೂ ನಿಯಂತ್ರಕರ ಕೊಠಡಿಗೆ ಬೀಗ ಹಾಕುವ ಮೂಲಕ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಪರಶುರಾಮ ಕಳ್ಳಿಮನಿ ಮಾತನಾಡಿ, ‘ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಶಾಲಾ-ಕಾಲೇಜು ಪ್ರಾರಂಭವಾಗಿ ಹಲವು ತಿಂಗಳು ಕಳೆದರೂ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುತ್ತಿಲ್ಲ’ ಎಂದು ಆರೋಪಿಸಿದರು.
ಗ್ರಾಮೀಣ ಪ್ರದೇಶಗಳಿಗೆ ದಿನಕ್ಕೊಂದು ಬಸ್ ಬಿಡುತ್ತಿದ್ದು, ಶಕ್ತಿ ಯೋಜನೆಯ ಕಾರಣ ಜನದಟ್ಟನೆ ಅಧಿಕವಾಗಿರುತ್ತದೆ. ಕೆಲವೊಮ್ಮೆ ಬಸ್ ಕೆಟ್ಟು ನಿಂತು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ‘ನ.1ರೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಪ್ರತಿಕ್ರಿಯಿಸಿದ ಸಂಘಟನಾಕಾರರು ಈ ಕುರಿತು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಸಾರಿಗೆ ಇಲಾಖೆಯ ಎಲ್ಲ ಕಚೇರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುದು ಎಂದು ಎಚ್ಚರಿಸಿದರು.
ಅಭಿಷೇಕ ಉಮಚಗಿ, ಶಶಾಂಕ ಪಲ್ಲೇದ, ಸೊಮಶೇಖರ, ಸಂಜನಾ ಪಾಟೀಲ, ಅನು ನಾಗಾವಿ, ವಿನಯ ತಪ್ಪಲದ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.