ಶಿರಹಟ್ಟಿ: ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ಕೊಟ್ಟು ಕೊಲೆ ಮಾಡಿ ಮನೆಯ ಮುಂದಿನ ನೀರಿನ ಟ್ಯಾಂಕಿನಲ್ಲಿ ಹಾಕಿದ ದುರ್ಘಟನೆ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ನಡೆದಿದೆ.
ಮಜ್ಜೂರು ತಾಂಡಾದ ನಿವಾಸಿ ಪ್ರಿಯಾಂಕ ಮಹಾಂತೇಶ ಲಮಾಣಿ (22) ಕೊಲೆಯಾದ ದುರ್ದೈವಿ. 2025ರ ಮೇ 10ರಂದು ಪ್ರಿಯಾಂಕ ಹಾಗೂ ಮಾಂತೇಶ ಅವರ ಮದುವೆಯಾಗಿತ್ತು. ವರದಕ್ಷಿಣೆಯಾಗಿ ₹ 3 ಲಕ್ಷ ಹಣ, ₹ 2 ಲಕ್ಷ ಬಾಂಡೆ ಸಾಮಾನು ₹25 ಸಾವಿರ ಕಿಮ್ಮತ್ತಿನ ಬಟ್ಟೆ ಕೊಟ್ಟು ಒಟ್ಟು ₹10 ಲಕ್ಷ ಖರ್ಚು ಮಾಡಿ ಮದುವೆ ಮಾಡಲಾಗಿತ್ತು.
ಇನ್ನೂ ₹ 2 ಲಕ್ಷ ಹಣ ತರುವುದಾಗಿ ಒತ್ತಾಯಿಸಿ ಆರೋಪಿಗಳಾದ ಗಂಡ ಮಾಂತೇಶ, ನಾದಿನಿ ಸೋನವ್ವ, ಮಾವ ಹನುಮಂತಪ್ಪ, ಅತ್ತೆ ಲಕ್ಕವ್ವ ಸೇರಿ ಒಳಸಂಚು ರೂಪಿಸಿ ಪ್ರಿಯಾಂಕಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ.
ಅ.14ರ ಮಂಗಳವಾರ ರಾತ್ರಿ ಯಾವುದೇ ಸಮಯದಲ್ಲಿ ಪ್ರಿಯಾಂಕಳನ್ನು ಕೊಲೆ ಮಾಡಿ ಗ್ರಾಮದ ನಾರಾಯಣರವರ ಮನೆಯ ನೀರಿನ ತೊಟ್ಟಿಯಲ್ಲಿ ಹಾಕಿದ್ದಾರೆ ಎಂದು ಪ್ರಿಯಾಂಕ ತಂದೆ ಕೃಷ್ಣಾನಾಯಕ್ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್‌ಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಖಲಾದ ಪ್ರಕರಣದನುಸಾರ ಪತಿ ಮಾಂತೇಶ, ಮಾವ ಹನುಮಂತಪ್ಪನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.