ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಹೊರಹೊಲಯದಲ್ಲಿ ಮದ್ಯ ಮಾರಾಟ ಅಂಗಡಿಯವರು ಬಿಸಾಡಿದ ಸಾರಾಯಿ ಪ್ಯಾಕೆಟ್‌ಗಳು
ಶಿರಹಟ್ಟಿ: ಪಟ್ಟಣ ಹಾಗೂ ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲಿ ಎಗ್ಗಿಲ್ಲದೇ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಅಬಕಾರಿ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿನ ಪೆಟ್ಟಿಗೆ ಅಂಗಡಿ, ವಾಸದ ಮನೆಗಳು ಹಾಗೂ ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದೆ. ಎಲ್ಲ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಮಹಿಳೆಯರು ಇಲಾಖೆ ವಿರುದ್ದ ಹರಿಹಾಯ್ದಿದ್ದಾರೆ.
ಗ್ರಾಮೀಣ ಭಾಗದಲ್ಲಿನ ಮದ್ಯ ಮಾರಾಟದಿಂದ ಬಹುತೇಕ ಸಂಸಾರಗಳು ಆರ್ಥಿಕ ಸಂಕಷ್ಟಗಳಿಗೆ ಸಿಲುಕುತ್ತಿರುವುದಲ್ಲದೇ; ಕೆಲವರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕೆಲವರು ಪೈಪೋಟಿ ದರದಲ್ಲಿ ಮದ್ಯ ಅಕ್ರಮ ಮಾರಾಟವನ್ನೇ ಮುಖ್ಯ ದಂಧೆಯಾಗಿಸಿಕೊಂಡಿದ್ದಾರೆ. ಕುಡಕರ ಹಾವಳಿಯಿಂದ ಹಳ್ಳಿಗಳಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ನಿತ್ಯ ಕುಡುಕರ ಹಾವಳಿ: ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪ, ಕಡಕೋಳ, ತಂಗೋಡ, ಹೆಬ್ಬಾಳ, ಮಾಚೇನಹಳ್ಳಿ, ಹೊಸಳ್ಳಿ, ಜಲ್ಲಿಗೇರಿ, ಕೊಂಚಿಗೇರಿ, ಛಬ್ಬಿ ಸೇರಿದಂತೆ ಬಹುತೇಕ ಗ್ರಾಮದಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಕುಡಿತದ ದಾಸರಾಗಿರುವ ಕೆಲವರು ಹಳ್ಳಿಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದು, ಕಳ್ಳರನ್ನು ಕಾಯುವುದೇ ಕೆಲಸವಾಗಿದೆ.
ಮದ್ಯಸೇವನೆ ಮುಕ್ತ ಗ್ರಾಮವನ್ನಾಗಿ ಮಾಡಲು ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಮಹಿಳೆಯರು ಈ ಕುರಿತು ಸಾಕಷ್ಟು ಮನವಿ ಮಾಡಿದ್ದರೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಸ್ಪಂದನೆ ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಸಾರಾಯಿ ಚಟದಿಂದ ನಿತ್ಯ ಯುವಕರು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಕಿರಾಚುಡುವ ಕುಡುಕರಿಂದಾಗಿ ನಿತ್ಯ ದುಡಿದು ಬರುವ ಜನರಿಗೆ ನೆಮ್ಮದಿಯ ನಿದ್ರೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಮ ಉಲ್ಲಂಘನೆ: ಪರವಾನಗಿ ಇರುವ ಮದ್ಯದಂಗಡಿಗಳಲ್ಲಿ ಮಾತ್ರ ಕುಳಿತು ಮದ್ಯ ಸೇವಿಸಲು ಅವಕಾಶವಿದೆ. ಆದರೆ, ಪಟ್ಟಣದ ಒಳಗೆ ಮತ್ತು ಹೊರಭಾಗದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲ ಡಾಬಾಗಳಲ್ಲಿಯೂ ಮದ್ಯ ಸೇವನೆ ಮುಕ್ತವಾಗಿ ನಡೆಯುತ್ತಿದೆ.
‘ಡಾಬಾ ಹಾಗೂ ಗ್ರಾಮಿಣ ಭಾಗದ ಪೆಟ್ಟಿಗೆ ಅಂಗಡಿಗಳಿಗೆ ತಿಂಗಳಿಗೊಮ್ಮೆ ಬಂದು ಮಾಲೀಕರ ‘ಯೋಗಕ್ಷೇಮ’ ವಿಚಾರಿಸುವ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪೆಟ್ಟಿಗೆ ಅಂಗಡಿ ಹಾಗೂ ದಾಬಾಗಳಲ್ಲಿ ರಾಶಿಯಾಗಿ ಬಿದ್ದಿರುವ ಮದ್ಯದ ಬಾಟಲಿಗಳು ಕಣ್ಣಿಗೆ ಕಾಣದಿರುವುದು ಅಚ್ಚರಿ’ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.
ಶಿರಹಟ್ಟಿ ಹಾಗೂ ತಾಲ್ಲೂಕಿನ ಹೊಬಳಿ ಮಟ್ಟದಲ್ಲಿ ಒಟ್ಟು 10 ಪರವಾನಗಿ ಪಡೆದ ಮದ್ಯದಂಗಡಿಗಳು ಹಾಗೂ 1 ಎಂಎಸ್ಐಎಲ್ ಮಳಿಗೆ ಇದೆ. ಇರುವ 10 ಅಂಗಡಿಗಳಲ್ಲಿ ಸಿಎಲ್ 2, ಸಿಎಲ್ 7, ಸಿಎಲ್ 4, ಸಿಎಲ್ 9 ಪರವಾನಗಿ ಹೊಂದಿವೆ.
ಸರ್ಕಾರದ ನಿಯಮದ ಪ್ರಕಾರ ಸಿಎಲ್ 2 ಮದ್ಯದ ಅಂಗಡಿಗಳಲ್ಲಿ ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟ ಮಾಡಬೇಕು. ಒಂದು ಕೌಂಟರ್ ಅಡಿಯಲ್ಲಿ ಮಾರಾಟ ಹಾಗೂ ಒಂದು ಸ್ಟಾಕ್ ರೂಮ್ ಮಾತ್ರ ಇರಬೇಕು. ಅಲ್ಲದೇ ಕೇವಲ ಪಾರ್ಸಲ್ ಮದ್ಯ ಮಾರಾಟಕ್ಕೆ ಮಾತ್ರ ಅವಕಾಶ ಇದೆ.
ಸಿಎಲ್4 ಅನ್ನು ಬಾರ್ ಅಸೋಸಿಯೇಷನ್ ಅಡಿಯಲ್ಲಿ ಪರವಾನಗಿ ನೀಡಲಾಗಿರುತ್ತದೆ. ಅಸೋಸಿಯೇಷನ್‌ನ (ಕ್ಲಬ್) ಸದಸ್ಯರಿಗೆ ಮಾತ್ರ ಇಲ್ಲಿ ಮದ್ಯ ಮಾರಾಟ ಮಾಡುವ ನಿಯಮವಿದೆ. ಕಡ್ಡಾಯವಾಗಿ ಐಡಿ ಕಾರ್ಡ್ (ಗುರುತಿನ ಚೀಟಿ) ಹೊಂದಿರುವ ಸದಸ್ಯರಿಗೆ ಮಾತ್ರ ಮದ್ಯ ಸೇವನೆಗೆ ಅವಕಾಶ ನೀಡುವುದು.
ಸಿಎಲ್ 7 ಪರವಾನಗಿಯನ್ನು ಹೆಚ್ಚಾಗಿ ಪ್ರವಾಸಿತಾಣಗಳಿಗೆ ಮಾತ್ರ ನೀಡಲಾಗುತ್ತಿದ್ದು, ಲಾಡ್ಜಿಂಗ್ ಸಹ ಇರಬೇಕು. ಲಾಡ್ಜಿಂಗ್‌ನಲ್ಲಿ ವಸತಿ ಬರುವ ಗ್ರಾಹಕರಿಗೆ ಮಾತ್ರ ಮದ್ಯ ಮಾರಾಟ ಮಾಡಬೇಕೆನ್ನುವ ನಿಯಮವಿದೆ.
ಸಿಎಲ್ 9 ಅಡಿಯಲ್ಲಿ ಬರುವ ಅಂಗಡಿಗಳಲ್ಲಿ ಊಟ ಮಾಡುವವರಿಗೆ ಮಾತ್ರ ಮದ್ಯ ಮಾರಾಟ ಮಾಡಬೇಕೆಂಬ ನಿಯಮ ಕಡ್ಡಾಯವಾಗಿದೆ. ಆದರೆ, ತಾಲ್ಲೂಕಿನಲ್ಲಿರುವ ಯಾವ ಮದ್ಯದಂಗಡಿಗಳಲ್ಲಿಯೂ ಈ ನಿಯಮಗಳು ಪಾಲನೆ ಆಗುತ್ತಿಲ್ಲ. ನಿಯಮ ಪಾಲಿಸದೆ ಮನಬಂದಂತೆ ಮಾರಾಟ ಮಾಡುತ್ತಿರುವುದು ಇಲಾಖೆಯ ನಿಷ್ಕಾಳಜಿಗೆ ಹಿಡಿದ ಕೈನ್ನಡಿ ಎಂದು ಪ್ರಜ್ಞಾವಂತರು ಹರಿಹಾಯ್ದಿದ್ದಾರೆ.
‘ಪ್ರತಿ ಬಾರ್ ಮತ್ತೆ ವೈನ್ ಶಾಪ್ ಮಾಲೀಕರು ತಿಂಗಳಿಗೆ 2ರಿಂದ 3 ಪ್ರಕರಣಗಳನ್ನು ಇಲಾಖೆಗೆ ನೀಡಬೇಕು. ಬಾರ್ ಮತ್ತು ವೈನ್‌ಶಾಪ್‌ನವರು ಅಬಕಾರಿ ಹಾಗೂ ಪೊಲೀಸರಿಗೆ ತಿಂಗಳಿಗೆ ಮಾಮೂಲಿ ನೀಡಲೇಬೇಕು. ಇಲ್ಲದಿದ್ದರೆ ಅಂಥ ಮಾಲೀಕರ ವಿರುದ್ಧ ಹೆಚ್ಚು ಪ್ರಕರಣ ದಾಖಲಿಸಿ ಟಾರ್ಗೆಟ್ ಮಾಡುತ್ತಾರೆ. ಈ ವ್ಯವಸ್ಥೆಯಿಂದಾಗಿಯೇ ಹಳ್ಳಿಗಳಿಗೆ ಮದ್ಯ ಅಕ್ರಮವಾಗಿ ಸಾಗಣೆ ಆಗುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.
‘ಮದ್ಯ ಅಕ್ರಮ ಮಾರಾಟಕ್ಕೆ ನಿಷೇಧ ಹೇರುವ ಸರ್ಕಾರವು ಒಳಗೊಳಗೆ ಟಾರ್ಗೆಟ್ (ಗುರಿ) ನೀಡಿ ಇದಕ್ಕೆ ಸಹಕಾರವನ್ನೂ ನೀಡುತ್ತಿದೆ. ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಗೆ ನೀಡಲಾದ ಗುರಿ ತಲುಪಲು ಮಾಲೀಕರು ನಿತ್ಯ ಹಳ್ಳಿಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ. ನಿತ್ಯ ಕಣ್ಮುಂದೆ ನಡೆಯುವ ಈ ಚಟುವಟಿಕೆಗಳನ್ನು ಇಲಾಖೆ ನೋಡುತ್ತಿದ್ದರೂ ಜಾಣಕುರುಡುತನ ಪ್ರದರ್ಶನ ಮಾಡುತ್ತಿರುವುದು ಬೇಲಿಯೇ ಎದ್ದು ಹೊಲ ಮೆಯ್ದಂತಾಗಿದೆ’ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳಿಂದ 100 ಮೀಟರ್ ದೂರದಲ್ಲಿ ಮಾತ್ರ ಬಾರ್‌ಗಳು ಅಥವಾ ಮದ್ಯದಂಗಡಿಗಳನ್ನು ಸ್ಥಾಪಿಸಬಹುದು. ಇದು ಹೆಚ್ಚಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿವಾಸಿಗಳು ವಾಸಿಸುವ ಪ್ರದೇಶ ಅಥವಾ ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಗಳಿಂದ 220 ಮೀಟರ್ ದೂರಬೇಕು ಎಂಬ ನಿಯಮ ಇದೆ.
ಆದರೆ, ಶಿರಹಟ್ಟಿ ಪಟ್ಟಣದಲ್ಲಿನ ಕೆಲವು ಬಾರ್ ಅಂಗಡಿಗಳು ಇದಕ್ಕೆ ವ್ಯತಿರಿಕ್ತವಾಗಿದ್ದು, ಇವುಗಳಿಗೆ ಯಾವ ಮಾನದಂಡದ ಮೇಲೆ ಪರವಾನಗಿ ನೀಡಿದ್ದಾರೋ ಎಂಬುದು ಗೊತ್ತಿಲ್ಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.