
ಶಿರಹಟ್ಟಿ: ಸಾರ್ವಜನಿಕರು ನಿಗದಿತ ಸಮಯಕ್ಕೆ ತೆರಿಗೆ ಪಾವತಿಸಿದರೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಆಡಳಿತ ಅಧಿಕಾರಿ ಕೆ. ರಾಘವೇಂದ್ರರಾವು ಹೇಳಿದರು.
ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ಪಟ್ಟಣ ಪಂಚಾಯಿತಿ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆದಾಯ ಕೃಡೀಕರಣ ಸಮರ್ಪಕವಾಗಿದ್ದರೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮತ್ತು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ.
ಸಾರ್ವಜನಿಕರು ನೀರು, ವಿದ್ಯುತ್, ಆಸ್ತಿ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆಗಳನ್ನು ನಿಗದಿತ ಸಮಯಕ್ಕೆ ಪಾವತಿಸಬೇಕು. ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಳಸಿಕೊಂಡು ಯಾವುದೇ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಲು ಸಾಧ್ಯ. ಗೂಗಲ್ ಪೇ, ಹಾಗೂ ಪೋನ್ ಪೇನಿಂದ ಸಾರ್ವಜನಿಕರು ಪಾರದರ್ಶಕವಾಗಿ ಆನ್‌ಲೈನ್ ಪೇಮೆಂಟ್ ಆಪ್‌ಗಳ ಮೂಲಕ ತೆರಿಗೆ ಪಾವತಿ ಮಾಡಿ ಸ್ಥಳದಲ್ಲಿಯೇ ರಸೀದಿ ಪಡೆದುಕೊಳ್ಳಬಹುದು. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದ್ದು, ಇದರಿಂದ ಸಾರ್ವಜನಿಕರಿಗೆ ಕಚೇರಿಗೆ ಅಲೆಯುವ ಅವಶ್ಯಕತೆ ಇರುವದಿಲ್ಲ. ಜೊತೆಗೆ ಸಮಯದ ಉಳಿತಾಯವಾಗುತ್ತದೆ ಎಂದು ಹೇಳಿದರು.
ಮುಖಂಡ ಮಾಬುಸಾಬ ಲಕ್ಷ್ಮೇಶ್ವರ ಮಾತನಾಡಿ, ಪಂಚಾಯಿತಿ ವತಿಯಿಂದ ಹೇಗೆ ಕಟ್ಟುನಿಟ್ಟಾಗಿ ತೆರಿಗೆ ವಸೂಲಿ ಮಾಡುತ್ತಾರೋ ಹಾಗೆಯೇ ಸಾರ್ವಜನಿಕರಿಗೆ ನಿಗದಿತ ಸಮಯಕ್ಕೆ ಉತಾರಗಳ ಪೂರೈಕೆ ಮಾಡಬೇಕು. ಅಲ್ಲದೇ ಪಂಚಾಬಗೂಗ ವ್ಯಾಪ್ತಿಯಲ್ಲಿನ ಪ್ರತಿಯೊಂದು ವಾರ್ಡಿನಲ್ಲಿನ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಪೂರಕವಾಗಿ ಬಜೆಟ್ ತಯಾರಿಸಬೇಕು ಎಂದರು.
ಮುಖ್ಯಾಧಿಕಾರಿ ಸವಿತಾ ತಾಂಬ್ರೆ, ಮುಖಂಡ ಚಾಂದಸಾಬ ಮುಳಗುಂದ, ಕೆ.ಎ.ಬಳಿಗೇರ, ಎಚ್.ಎಂ.ದೇವಗಿರಿ, ಹೊನ್ನಪ್ಪ ಶಿರಹಟ್ಟಿ, ಅಲ್ಲಾಭಕ್ಷಿ ನಗಾರಿ, ಆನಂದ ಕೋಳಿ, ಅಶ್ರತ್ ಢಾಲಾಯತ್, ಇಸಾಕ್‌ಅಹಮ್ಮದ್ ಆದ್ರಳ್ಳಿ, ಮುನ್ನಾ ಢಾಲಾಯತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.