ADVERTISEMENT

ಶಿವಲಿಂಗ ಪಾಣಿಪೀಠ ಮಾದರಿಯ ಕಲ್ಲು ಪತ್ತೆ

2ನೇ ದಿನದ ಅಂತ್ಯಕ್ಕೆ 2.5 ಅಡಿಗಳಷ್ಟು ಉತ್ಖನನ: ಬೆರಳೆಣಿಕೆಯಷ್ಟು ಮಡಿಕೆ ಚೂರುಗಳು ಗೋಚರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:17 IST
Last Updated 18 ಜನವರಿ 2026, 4:17 IST
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಉತ್ಖನನ ಕಾರ್ಯ ಭರದಿಂದ ನಡೆಯಿತು
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಉತ್ಖನನ ಕಾರ್ಯ ಭರದಿಂದ ನಡೆಯಿತು   

ಗದಗ: ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು ಶನಿವಾರ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಇದು ಶಿವಲಿಂಗದ ಪಾಣಿಪೀಠ ಇರಬಹುದು ಎಂದು ಅಂದಾಜಿಸಲಾಗಿದೆ. ಎರಡನೇ ದಿನದ ಅಂತ್ಯಕ್ಕೆ 2.5 ಅಡಿಗಳಷ್ಟು ಉತ್ಖನನ ನಡೆದಿದೆ.

ಶನಿವಾರ ನಡೆದ ಉತ್ಖನನದ ಆರಂಭದಲ್ಲೇ ಪುರಾತನ ಅವಶೇಷ ಪತ್ತೆಯಾಯಿತು. ದೇವಸ್ಥಾನಗಳಲ್ಲಿ ದೈವಕ್ಕೆ ಅಭಿಷೇಕ ಮಾಡಿದ ನೀರು ಹರಿಯಲು ಮಾಡಿರುವ ಪಾಣಿಪೀಠದಂತೆ ಕಾಣುವ ಈ ಪ್ರಾಚ್ಯಾವಶೇಷ ಯಾವ ಕಾಲದ್ದು ಎಂಬುದನ್ನು ಪುರಾತತ್ವ ಇಲಾಖೆಯ ತಜ್ಞರು ಸ್ಪಷ್ಟ ಪಡಿಸಬೇಕಿದೆ. ಇದರ ಜತೆಗೆ ಕೆಲವು ಮಡಿಕೆ ಚೂರುಗಳು ಸಿಕ್ಕಿವೆ. ಇದು ಪುರಾತನ ಕಾಲದ್ದೋ; ಇತ್ತೀಚಿನದ್ದೋ ಎಂಬುದನ್ನು ತಜ್ಞರು ಪರಿಶೀಲನೆ ನಡೆಸಿದ ಬಳಿಕ ಗೊತ್ತಾಗಲಿದೆ. 

‘ಕೋಟೆ ವೀರಭದ್ರೇಶ್ವರ ದೇವಸ್ಥಾನ ಹಾಗೂ ಸಿದ್ಧರ ಬಾವಿ ನಡುವೆ ನಡೆದಿರುವ ಉತ್ಖನನದ ವೇಳೆ ಶನಿವಾರ ಪ್ರಾಚ್ಯಾವಶೇಷ ಸಿಕ್ಕಿದೆ. ಈ ಜಾಗದಲ್ಲಿ ದೇವಸ್ಥಾನದಿಂದ ಬಾವಿವರೆಗೆ ಮೆಟ್ಟಿಲುಗಳಿರುವ ಸಾಧ್ಯತೆ ಇದೆ. ಆರೇಳು ಅಡಿ ಕೆಳಕ್ಕೆ ಇಳಿದರೆ ಇನ್ನೂ ಹಲವಾರು ಪ್ರಾಚ್ಯಾವಶೇಷಗಳು ಸಿಗುವುದು ಖಚಿತ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.

ADVERTISEMENT

ಉತ್ಖನನ ಸ್ಥಳಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಿ ಗದಗ ಜಿಲ್ಲಾಧಿಕಾರಿ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದ್ದರು. ಆದರೆ, ಗ್ರಾಮಸ್ಥರು ಉತ್ಖನನ ಕಾರ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಅಧಿಕಾರಿಗಳು ಒಪ್ಪದಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು. ಇದರ ನಡುವೆ ಹಲವರು ಉತ್ಖನನ ನಡೆಯುವ ಜಾಗದಲ್ಲಿ ಜಮಾಯಿಸಿದ್ದು ಕಂಡುಬಂತು.

ಉತ್ಖನನ ಕೆಲಸದಲ್ಲಿ 20 ಮಹಿಳೆಯರು, 10 ಪುರುಷರು ಸೇರಿ ಒಟ್ಟು 30 ಕಾರ್ಮಿಕರು ಭಾಗಿಯಾಗಿದ್ದರು.

ಉತ್ಖನನದ ವೇಳೆ ಶನಿವಾರ ಗೋಚರಿಸಿದ ಪ್ರಾಚ್ಯಾವಶೇಷ
ಲಕ್ಕುಂಡಿಯಲ್ಲಿ ನಡೆದಿರುವ ಉತ್ಖನನಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಭಾನುವಾರ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ಸಲಹಾ ಸಮಿತಿ ಜತೆಗೆ ಸಭೆ ನಡೆಸಲಿದ್ದಾರೆ
ಶರಣು ಗೋಗೇರಿ ಪ್ರಾಧಿಕಾರದ ಆಯುಕ್ತ

ಇಂದು ಮಹತ್ವದ ಸಭೆ

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆದಿರುವ ಉತ್ಖನನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಜ. 18ರಂದು ಸಂಜೆ 4.30ಕ್ಕೆ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಲಕ್ಕುಂಡಿಯಲ್ಲಿ ದೊರೆತಿರುವ 466 ಗ್ರಾಂ ನಿಧಿ ಪತ್ತೆ ಉತ್ಖನನ ಕುರಿತು ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಜತೆಗೆ ನಿಧಿಯಲ್ಲಿ ದೊರೆತ ಚಿನ್ನಾಭರಣ ಯಾವ ಕಾಲದ್ದು ಎಂಬ ನಿಖರವಾದ ಮಾಹಿತಿ ನೀಡಲು ಪುರಾತತ್ವ ಇಲಾಖೆ ಅಧಿಕಾರಿಗಳು ನಾಲ್ಕು ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದರು. ಚಿನ್ನಾಭರಣ ಕುರಿತು ನಿಖರ ವರದಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಯಲ್ಲಿ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ಉತ್ಖನನದ ನಿರ್ದೇಶದ ಟಿ.ಎಂ.ಕೇಶವ ಮೈಸೂರು ಪುರಾತತ್ವ ಇಲಾಖೆ ಆಯುಕ್ತ ದೇವರಾಜು ಪುರಾತತ್ವ ಇಲಾಖೆ ನಿರ್ದೇಶಕ ಶೇಜೇಶ್ವರ ರಾಜ್ಯ ವಸ್ತು ಸಂಗ್ರಹಾಲಯದ ನಿರ್ದೇಶಕಿ ಸ್ಮಿತಾ ರೆಡ್ಡಿ ಜಿಲ್ಲಾಧಿಕಾರಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಎನ್ ಶ್ರೀಧರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಲಿದ್ದಾರೆ.