ADVERTISEMENT

ಶ್ರಮ ಸಂಸ್ಕೃತಿ ಬೆಳೆಸಿದ ಸಂಡೂರ ಮಠ

‘ಕನ್ನಡದ ಗಡಿ ಕಾಯ್ದ ಲಿಂಗಾಯತ ಮಠಗಳು’ ಉಪನ್ಯಾಸದಲ್ಲಿ ತೋಂಟದ ಶ್ರೀ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:47 IST
Last Updated 20 ನವೆಂಬರ್ 2020, 1:47 IST
ಶಿವಾನುಭವದಲ್ಲಿ ಎಸ್.ವಿ.ಸಂಕನೂರ, ಎನ್.ಎಂ.ಅಂಬಲಿಯವರ, ಡಾ. ಪ್ರಕಾಶ ಧರಣಾ ಅವರನ್ನು ತೋಂಟದ ಸಿದ್ಧರಾಮ ಶ್ರೀಗಳು ಸನ್ಮಾನಿಸಿದರು
ಶಿವಾನುಭವದಲ್ಲಿ ಎಸ್.ವಿ.ಸಂಕನೂರ, ಎನ್.ಎಂ.ಅಂಬಲಿಯವರ, ಡಾ. ಪ್ರಕಾಶ ಧರಣಾ ಅವರನ್ನು ತೋಂಟದ ಸಿದ್ಧರಾಮ ಶ್ರೀಗಳು ಸನ್ಮಾನಿಸಿದರು   

ಗದಗ: ‘ಗಡಿಭಾಗದಲ್ಲಿ ಕನ್ನಡ ಮತ್ತು ಕನ್ನಡಿಗರ ಪರಿಸ್ಥಿತಿ ಸಂಕಟಮಯವಾಗಿದೆ. ಕನ್ನಡದ ಬೆಳವಣಿಗೆ ಮತ್ತು ಕನ್ನಡಿಗರಿಗೆ ಬಲ ತುಂಬುವ ಹಿನ್ನೆಲೆ ಗಡಿಭಾಗದ ಲಿಂಗಾಯತ ಮಠಗಳ ಕೊಡುಗೆ ಅಪಾರ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಅವರು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2511ನೇ ಶಿವಾನುಭವದಲ್ಲಿ ‘ಕನ್ನಡದ ಗಡಿ ಕಾಯ್ದ ಲಿಂಗಾಯತ ಮಠಗಳು’ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.

‘ಪುಸ್ತಕ ಮತ್ತು ಶ್ರಮ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಕನ್ನಡ ಸಂಸ್ಕೃತಿಯನ್ನು ಸಂವರ್ಧನೆಗೊಳಿಸುವ ಕಾಯಕವನ್ನು ಸಂಡೂರ ವಿರಕ್ತಮಠ ಅನುಕರಣೀಯದಂತೆ ಮಾಡಿದೆ. ಪುಸ್ತಕ ಪ್ರಕಟಣೆ, ಕಮ್ಮಟಗಳ ಆಯೋಜನೆ, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಿ, ಬಳ್ಳಾರಿ ಗಡಿ ಪ್ರದೇಶದಲ್ಲಿ ಕನ್ನಡ ಕಟ್ಟುವ ಕಾರ್ಯವನ್ನು ಪೂಜೆಯಂತೆ ನೆರವೇರಿಸಿದೆ’ ಎಂದು ಹೇಳಿದರು.

ADVERTISEMENT

‘ಕನ್ನಡಕ್ಕೆ ಸಂಡೂರ ವಿರಕ್ತಮಠದ ಕೊಡುಗೆ’ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ಕೆ.ರವೀಂದ್ರನಾಥ ಉಪನ್ಯಾಸ ನೀಡಿ, ‘ಸಂಡೂರಿನ ವಿರಕ್ತಮಠ ಸಾಹಿತ್ಯ, ಸಂಸ್ಕೃತಿ, ಸಮಾಜ ಮತ್ತು ಧಾರ್ಮಿಕ ಪ್ರಸಾರ ಪರಿಚಲನೆಗಳನ್ನು ಕಾಯಕರೂಪದಲ್ಲಿ ಗಡಿಭಾಗದಲ್ಲಿ ಅನುಷ್ಠಾನಗೊಳಿಸುತ್ತಿದೆ. ಕನ್ನಡ ಸಂಸ್ಕೃತಿ ಸಂವರ್ಧನೆ ಹಿನ್ನೆಲೆ ಪ್ರಭುದೇವರ ಜನಕಲ್ಯಾಣ ಸಂಸ್ಥೆ ಜನಮುಖಿ ಕಾರ್ಯಗಳ ಮೂಲಕ ಸಮಾಜೋನ್ನತಿ ಕಾರ್ಯ ಮಾಡುತ್ತಿದೆ’ ಎಂದು ತಿಳಿಸಿದರು.‌

ಸಂಡೂರ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ‘ಬಳ್ಳಾರಿ ಗಡಿಪ್ರದೇಶದಲ್ಲಿ ಕನ್ನಡಿಗರು ಮತ್ತು ತೆಲುಗು ಭಾಷಿಕರ ನಡುವೆ ಸಾಮರಸ್ಯವಿದೆ. ಕನ್ನಡ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಸಂಡೂರಮಠ ಕಾರ್ಯನಿರತವಾಗಿದೆ. ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಿದೆ. ಕನ್ನಡ ಭಾಷಾಭಿವೃದ್ಧಿಗಾಗಿ ಪುಸ್ತಕ ಪ್ರಕಟಣೆ ಕೈಗೊಂಡಿದೆ’ ಎಂದು ತಿಳಿಸಿದರು.

ಪರಮೇಶ್ವರಯ್ಯ ಸೊಪ್ಪಿಮಠ ಅವರು ರಚಿಸಿರುವ ‘ಕನ್ನಡ ಕಹಳೆ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.

ವಿಧಾನ ಪರಿಷತ್ತಿನ ಸದಸ್ಯ ಎಸ್.ವಿ. ಸಂಕನೂರ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಎನ್.ಎಂ. ಅಂಬಲಿಯವರ, ಭಾರತೀಯ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಡಾ. ಪ್ರಕಾಶ ಕೆ. ಧರಣಾ ಅವರನ್ನು ಸನ್ಮಾನಿಸಲಾಯಿತು.

ರಾಜೇಶ್ವರಿ ಕಲಾಕುಟೀರದ ವಿದ್ಯಾರ್ಥಿಗಳು ಸ್ವಾಗತ ನೃತ್ಯ, ಮೋಹಿನಿ ಅಟ್ಟಂ, ಕನ್ನಡ ಗೀತ ನೃತ್ಯಗಳನ್ನು ಪ್ರದರ್ಶಿಸಿದರು. ಧರ್ಮಗ್ರಂಥ ಪಠಣವನ್ನು ಸಪ್ನಾ ಮಂಜುನಾಥ ಹಾಗೂ ವಚನ ಚಿಂತನ ಮೇಘನಾ ರಮೇಶ ವಾಲ್ಮೀಕಿ ನಡೆಸಿಕೊಟ್ಟರು.

ರತ್ನಕ್ಕಬಸನಗೌಡ ಪಾಟೀಲ, ಬಾಹುಬಲಿ ಜೈನ್‌, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಸಂಘದ ಅಧ್ಯಕ್ಷ ಎಂ.ಸಿ.ಐಲಿ,ಗೌರಕ್ಕಬಡಿಗಣ್ಣವರ, ವೀರಣ್ಣಗೊಡಚಿ, ವಿಜಯಕುಮಾರಹಿರೇಮಠ, ಶಶಿಧರಬೀರನೂರ, ಪ್ರಕಾಶ ಅಸುಂಡಿ, ಪ್ರಭು ಗಂಜಿಹಾಳ, ರತ್ನಕ್ಕ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.