
ಗಜೇಂದ್ರಗಡ: ಪಟ್ಟಣದ ತಹಶೀಲ್ದಾರ್ ಕಚೇರಿ ಕಾಂಪೌಂಡ್‌ಗೆ ಹೊಂದಿಕೊಂಡು ಇಟ್ಟಿದ್ದ ಅನಧಿಕೃತ ಗೂಡಂಗಡಿಗಳನ್ನು ಪುರಸಭೆ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ತಹಶೀಲ್ದಾರರ ಕಾರ್ಯಾಲಯದ ಸುತ್ತಮುತ್ತ 30ಕ್ಕೂ ಹೆಚ್ಚು ಅನಧಿಕೃತ ಗೂಡಂಗಡಿಗಳಿದ್ದು, ಪೊಲೀಸರ ಭಧ್ರತೆಯಲ್ಲಿ ತೆರವು ಕಾರ್ಯ ನಡೆಸಿದರು. ಕೆಲ ಅಂಗಡಿ ಮಾಲೀಕರು ಸ್ವಯಂಪ್ರೇರಣೆಯಿಂದ ಅಂಗಡಿ ತೆರವು ಮಾಡಿದರು. ಇನ್ನೂ ಕೆಲ ಅಂಗಡಿಗಳನ್ನು ಪುರಸಭೆ ಜೆಸಿಬಿ ಮೂಲಕ ತೆರವು ಮಾಡಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಕೆಲ ವ್ಯಾಪಾರಸ್ಥರ ನಡುವೆ ವಾಗ್ವಾದ ನಡೆಯಿತು.
ತಹಶೀಲ್ದಾರ್ ಕಚೇರಿ ಕಾಂಪೌಂಡ್ ಸುತ್ತ ಸುಮಾರು 30ಕ್ಕೂ ಹೆಚ್ಚು ಅನಧಿಕೃತ ಗೂಡಂಗಡಿಗಳಿವೆ. ತಹಶೀಲ್ದಾರ್ ಕಚೇರಿಗೆ ಹಳ್ಳಿಗಳಿಂದ ನಿತ್ಯ ನೂರಾರು ಜನರು ಬರುತ್ತಾರೆ. ಗೂಡಂಗಡಿಗಳಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕಾರಣ ಈಗಾಗಲೇ 17 ಅನಧಿಕೃತ ಗೂಡಂಗಡಿ, 6 ತಳ್ಳು ಗಾಡಿಗಳನ್ನು ತೆರವುಗೊಳಿಸಲಾಗಿದೆ. ಉಳಿದ ಅಂಗಡಿಕಾರರು ಒಂದು ದಿನ ಕಾಲಾವಕಾಶ ಕೇಳಿದ್ದಾರೆ. ಅಲ್ಲದೇ ಕಾಲಕಾಲೇಶ್ವರ ವೃತ್ತದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿರುವ ಎಲ್ಲ ಅನಧಿಕೃತ ಅಂಗಡಿಗಳನ್ನು ತೆರವು ಕಾರ್ಯಾಚರಣೆ ಮುಂದುವರಿಯಲಿದೆʼ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.
ಕಾರ್ಯಾಚರಣೆ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.