ಶಿರಹಟ್ಟಿ: ಸ್ಥಳೀಯ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರೊಬ್ಬರ ರೇಷ್ಮೆಗೂಡು ಕಳವಾದ ಪ್ರಕರಣಕ್ಕೆ ಸಂಬಂಧಿಸಿ ರೇಷ್ಮೆ ಜಂಟಿ ನಿರ್ದೇಶಕ ಎಸ್.ಎಂ. ಕೋರೆ ಅವರು ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿದರು. 30ಕ್ಕೂ ಹೆಚ್ಚು ರೈತರು ರೇಷ್ಮೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಮನವರಿಕೆ ಮಾಡಿದರು.
‘ಮಾರುಕಟ್ಟೆ ಅಧಿಕಾರಿಯ ಕುಮ್ಮಕ್ಕಿನಿಂದ ಕಳವು ನಡೆದಿದೆ. ಮೊದಲು ಈ ಅಧಿಕಾರಿಗಳನ್ನು ತೆಗೆದು ಹಾಕಬೇಕು. ಸದ್ಯ ಇರುವ ಖರೀದಿದಾರರ ಒಳ ಒಪ್ಪಂದದಿಂದ ಕಳವು ನಡೆಯುತ್ತಿದ್ದು, ಅವರ ಪರವಾನಗಿ ರದ್ದುಪಡಿಸಬೇಕು. ಮಾರುಕಟ್ಟೆಯಲ್ಲಿ ಗೂಡು ಕಳವಾಗಿದ್ದರಿಂದ ಅಧಿಕಾರಿಗಳೇ ಪ್ರಕರಣ ದಾಖಲಿಸಬೇಕು. ಅನಧಿಕೃತವಾಗಿ ರಿಲಿಂಗ್ ಶೆಡ್‌ಗಳಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆ ಬಂದ್ ಮಾಡಬೇಕು. ಇ–ಮಾರುಕಟ್ಟೆ ಪ್ರಾರಂಭಿಸಿ ಸಮಯಕ್ಕನುಸಾರವಾಗಿ ರೈತರಿಗೆ ಹಣ ಪಾವತಿಸಬೇಕು. ಸ್ವಚ್ಛತೆ ಕಾಪಾಡಬೇಕು’ ಎಂದು ಆಗ್ರಹಿಸಿದರು.
ಎಸ್.ಎಂ.ಕೋರೆ ಮಾತನಾಡಿ, ‘ಪ್ರಕರಣವನ್ನು ಕಮಿಷನರ್ ಗಮನಕ್ಕೆ ತರುತ್ತೇನೆ. ಸದ್ಯ ಇರುವ ರಿಲರ್‌ಗಳ ಪರವಾನಗಿ ರದ್ದುಪಡಿಸಲಾಗುದು. ಕೂಡಲೇ ರಿಲಿಂಗ್ ಶೆಡ್ ತೆರವುಗೊಳಿಸಲು ಆದೇಶ ಮಾಡುತ್ತೇನೆ. ಕಳವು ಪ್ರಕರಣದಲ್ಲಿ ದೂರು ದಾಖಲಿಸಲು ಅಧಿಕಾರಿಗಳಿಗೆ ಆದೇಶಿಸುತ್ತೇನೆ. ರೈತರ ಬೇಡಿಕೆಗಳನ್ನು ತಿಂಗಳೊಳಗೆ ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.
ಇದಕ್ಕೆ ಒಪ್ಪದ ರೈತರು, ‘ಈ ಹಿಂದೆಯೂ ಕೆಲವು ಸಂದರ್ಭದಲ್ಲಿ ಜೆ.ಡಿ ಅವರು ಹುಸಿ ಭರವಸೆ ನೀಡಿದ್ದರು. ನೀವು ನೀಡುತ್ತಿರುವ ಭರವಸೆ ಈಡೇರುವ ವರೆಗೆ ಮಾರುಕಟ್ಟೆ ಬಂದ್ ಮಾಡಲಾಗುತ್ತದೆ’ ಎಂದರು. ಮಾರುಕಟ್ಟೆಯ ಎಲ್ಲ ಸಮಸ್ಯೆ ನಿವಾರಿಸಿ, ನವೀಕರಣಗೊಳಿಸಲು ಕಮಿಷನರ್ ಬರಬೇಕೆಂದು ಮಾರುಕಟ್ಟೆಗೆ ಮತ್ತೆ ಬೀಗ ಹಾಕಲಾಯಿತು.
ಜಿಲ್ಲಾ ರೇಷ್ಮೆ ಉಪ ನಿರ್ದೇಶಕ ಕೈಲಾಸಮೂರ್ತಿ, ರೇಷ್ಮೆ ಬೆಳೆಗಾರರಾದ ನೀಲಪ್ಪ ಖಾನಾಪುರ, ಎಚ್.ಎಂ. ದೇವಗಿರಿ, ಮಂಜುನಾಥ ಘಂಟಿ, ಗಂಗಪ್ಪ ದುರಗಣ್ಣವರ, ಈರಣ್ಣ ಕಲ್ಯಾಣಿ, ನಿಂಗಪ್ಪ ತುಳಿ, ಸಂತೋಷ ಕುರಿ, ಆನಂದ ಸ್ವಾಮಿ, ಗೂಳಪ್ಪ ಕರಿಗಾರ, ಫಕೀರೇಶ ಮುರಾರಿ, ನಾಗೇಶ ಇಂಗಳಗಿ, ಎನ್.ವೈ. ಕರಿಗಾರ, ಬೀರಪ್ಪ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.