ಗಜೇಂದ್ರಗಡ: ತಾಲ್ಲೂಕಿನ ಗುಳಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇವಿನಕಟ್ಟಿ ಗ್ರಾಮದಲ್ಲಿ ಚರಂಡಿಗಳು ಹೂಳು ತುಂಬಿಕೊಂಡಿದ್ದು, ಸ್ವಚ್ಛತೆ ಇಲ್ಲದ ಕಾರಣ ಗ್ರಾಮದ ಜನರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
ಗ್ರಾಮದಲ್ಲಿರುವ ಮುಖ್ಯ ಚರಂಡಿಗಳು ಶಿಥಿಲಗೊಂಡಿದ್ದು, ಹಲವು ವರ್ಷಗಳಿಂದ ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಗ್ರಾಮದಿಂದ ದ್ಯಾಮಹುಣಸಿ, ಸೂಡಿ, ಮುಶಿಗೇರಿ ಸಂಪರ್ಕಿಸುವ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಳು ಹೂಳು ತುಂಬಿಕೊಂಡು ಆಪು ಬೆಳೆದಿದ್ದು, ಗಬ್ಬೆದ್ದು ನಾರುತ್ತಿವೆ. ಸ್ಥಳೀಯರು ಸೊಳ್ಳೆಗಳ ಕಾಟ ಹಾಗೂ ದುರ್ವಾಸನೆಯಿಂದ ಬೇಸತ್ತಿದ್ದಾರೆ.
ಬೇವಿನಕಟ್ಟಿ ಗ್ರಾಮದಿಂದ ದ್ಯಾಮಹುಣಸಿ ಸಂಪರ್ಕಿಸುವ ರಸ್ತೆ ತುಂಬ ಗುಂಡಿಗಳು ನಿರ್ಮಾಣವಾಗಿದ್ದು, ರಸ್ತೆ ಪಕ್ಕದಲ್ಲಿ ಚರಂಡಿಗಳಿಲ್ಲದ ಕಾರಣ ಕೊಳಚೆ ತುಂಬಿಕೊಂಡಿದೆ. ಈ ರಸ್ತೆಗೆ ಹೊಂದಿಕೊಂಡು ದಲಿತರ ಕಾಲೊನಿ ಇದ್ದು, ಅಲ್ಲಿನ ನಿವಾಸಿಗಳ ಸ್ಥಿತಿ ಅಸಹನೀಯವಾಗಿದೆ.
ಶಾಲೆ ಮುಂದಿನ ಚರಂಡಿಯೂ ಹಲವು ವರ್ಷಗಳಿಂದ ಹೂಳು ತುಂಬಿಕೊಂಡಿದೆ. ಶಾಲೆ ಪಕ್ಕದಲ್ಲಿರುವ ನೀರಿನ ಟ್ಯಾಂಕ್ ಹಾಗೂ ನೀರಿನ ತೊಟ್ಟಿ ಸ್ವಚ್ಛಗೊಳಿಸದ ಕಾರಣ ಪಾಚಿ ತುಂಬಿಕೊಂಡಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳ ಪಕ್ಕದಲ್ಲಿ ಗ್ರಾಮಸ್ಥರು ತಿಪ್ಪೆಗಳನ್ನು ಹಾಕಿದ್ದು, ಈ ರಸ್ತೆಗಳು ಬಯಲು ಶೌಚಾಲಯಗಳಾಗಿವೆ.
‘ಗ್ರಾಮದಲ್ಲಿ ಸ್ವಚ್ಛತೆಗೆ ಗ್ರಾಮ ಪಂಚಾಯ್ತಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದ ದುರ್ಗಾದೇವಿ ದೇವಸ್ಥಾನದ ಸುತ್ತ ಸ್ವಚ್ಛತೆ ಇಲ್ಲದಂತಾಗಿದ್ದು, ಗ್ರಾಮದಲ್ಲಿರುವ ನೀರಿನ ಟ್ಯಾಂಕ್‌ಗಳನ್ನು ಹಲವು ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳ ಸ್ಥಿತಿ ಶೋಚನೀಯವಾಗಿವೆ’ ಎಂದು ಗ್ರಾಮಸ್ಥರಾದ ಶರಣಪ್ಪ ಭಾವಿಕಟ್ಟಿ, ಮಂಜುನಾಥ ಆಡಿನ ಗ್ರಾಮ ಪಂಚಾಯ್ತಿ ವಿರುದ್ದ ಹರಿಹಾಯ್ದರು.
ಪ್ರತಿ ಸೋಮವಾರ ಒಂದೊಂದು ಊರಿನಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ವಚ್ಛತೆ ಕಾರ್ಯ ನಡೆಸಲಾಗುತ್ತದೆ. ಕಳೆದ 15 ದಿನಗಳ ಹಿಂದೆ ಬೇವಿನಕಟ್ಟಿ ಗ್ರಾಮದಲ್ಲಿ ಸ್ವಚ್ಛತೆ ಮಾಡಲಾಗಿದೆ. ಮುಖ್ಯ ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದುಬಸವರಾಜ ಆದಿ ಅಧ್ಯಕ್ಷರು ಗ್ರಾಮ ಪಂಚಾಯ್ತಿ ಗುಳಗುಳಿ
ಬೇವಿನಕಟ್ಟಿ ಗ್ರಾಮದಿಂದ ದ್ಯಾಮಹುಣಸಿ ಸಂಪರ್ಕಿಸುವ ರಸ್ತೆ ಪಕ್ಕದ ಚರಂಡಿಗೆ ಬೂದು ನಿರ್ವಹಣೆ ಯೋಜನೆ ಅಡಿಯಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದ್ದು ಗ್ರಾಮದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದುಹುಲ್ಲಪ್ಪ ಹಳ್ಳಿಕೇರಿ ಪಿಡಿಒ ಗುಳಗುಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.