
ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ‘ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ–2025’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಗಡಿ ಗ್ರಾಮದ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ ಹಾಗೂ ಬನ್ನಿಕೊಪ್ಪದ ಬ್ರಹನ್ಮಠದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ‘ಸುಮಾರು ಎರಡು ತಿಂಗಳು ಶ್ರೀಮಠದ ಬಸವರಾಜ ಸ್ವಾಮೀಜಿ ಅವರು ಬಸವ ಪುರಾಣ ನಡೆಸಿಕೊಡುತ್ತಿದ್ದಾರೆ. ನವೆಂಬರ್ 21ರಂದು ಪುರಾಣ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ. ನಾರಾಯಣಪುರದ ಬಸವೇಶ್ವರ ದೇವಸ್ಥಾನದಿಂದ ಕುಂಭ ಮತ್ತು ಸಕಲ ವಾದ್ಯಗಳೊಂದಿಗೆ ಬಸವ ಪುರಾಣ ಗ್ರಂಥ ಹಾಗೂ ಬಸವರಾಜ ಸ್ವಾಮೀಜಿ ಮೆರವಣಿಗೆ ನಡೆಯಲಿದೆ. ಸುಮಾರು 15 ಸಾವಿರ ಭಕ್ತರು ಸೇರುವ ನಿರೀಕ್ಷೆಯಿದೆ’ ಎಂದರು.
ಸಿದ್ದರಾಮಪ್ಪ ಮೊರಬದ ಮಾತನಾಡಿ, ‘ಪುರಾಣ ಮಂಗಲೋತ್ಸವದ ಸಮಾರೋಪ ಮತ್ತು ಕರ್ಪೂರದ ಕಾರ್ತೀಕೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಶಿವನಗೌಡ ಪಾಟೀಲ ಮಾತನಾಡಿ, ‘ಬಸವರಾಜ ಶ್ರೀಗಳ 25ನೇ ವರ್ಷದ ಪಟ್ಟಾಧಿಕಾರದ ಅಂಗವಾಗಿ ನವೆಂಬರ್ 22ರಂದು ಬೆಳಿಗ್ಗೆ 8 ಗಂಟೆಗೆ ಮಂಟಪದ ಪೂಜಾ ಕಾರ್ಯ ನಡೆಯಲಿದೆ. ಭಕ್ತರು ಸೇರಿದಂತೆ ನಾಡಿನ 25 ಸ್ವಾಮೀಜಿಗಳು ಭಾಗಿಯಾಗಲಿದ್ದು, ಸುಮಾರು 15 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಪಕೀರ ಸಿದ್ಧರಾಮ ಸ್ವಾಮೀಜಿ, ನಾಗಭೂಷಣ ಸ್ವಾಮೀಜಿ, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ಹೇಳಿದರು.
ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಮೋಹನ ಗುತ್ತೆಮ್ಮನವರ, ಮಹೇಶ ಮೇಟಿ, ರಾಜೇಂದ್ರ ಹಲಗಲಿ, ಸುರೇಶ ಬಸವರಡ್ಡಿ, ರಾಘವೇಂದ್ರ ಇಚ್ಚಂಗಿ, ಸುರೇಶ ಬ್ಯಾಲಹುಣಸಿ, ವಿರೂಪಾಕ್ಷ ನಂದೇಣ್ಣವರ, ಶೇಖ್ರಪ್ಪ ಮಹಾಜನಶೆಟ್ಟರ, ಕೋಟ್ರೇಶ ಸಜ್ಜನ, ದ್ಯಾಮಣ್ಣ ಮಾಳಮ್ಮನ್ನವರ, ರಬ್ಬಾನಿ ಚೌರಿ ಇದ್ದರು.
ಬಸವರಾಜ ಶ್ರೀಗಳ 50ನೇ ತುಲಾಭಾರ ಮಾಡಲಾಗುವುದು. 60 ದಿನ ಪಠಿಸಿರುವ ಬಸವ ಪುರಾಣವು ಬಸವರಾಜ ಶ್ರೀಗಳ ಹಸ್ತಲಿಪಿಯದ್ದಾಗಿದೆ
-ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಬ್ರಹನ್ಮಠ ಬನ್ನಿಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.