ADVERTISEMENT

ಹತಾಶಭಾವದಿಂದ ಸಣ್ಣತನದ ಮಾತು: ಗೋವಿಂದಗೌಡ

ಬಿಜೆಪಿ ಮುಖಂಡ ಅನಿಲ ಮೆಣಸಿಕಾಯಿ ವಿರುದ್ಧ ಕಿಡಿಕಾರಿದ ಗೋವಿಂದಗೌಡ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 16:54 IST
Last Updated 26 ನವೆಂಬರ್ 2020, 16:54 IST

ಗದಗ: ‘ಚುನಾವಣಾ ಆಯೋಗ, ಪೊಲೀಸ್‌ ಇಲಾಖೆ, ತನಿಖಾ ಸಂಸ್ಥೆಗಳೆಲ್ಲವೂ ಬಿಜೆಪಿ ಸರ್ಕಾರದ ಕೈಗೊಂಬೆಗಳಾಗಿವೆ. ಅದೇ ರೀತಿ, ಎಚ್‌.ಕೆ.ಪಾಟೀಲ ಅವರಂತಹ ಜನಪ್ರಿಯ ಶಾಸಕರ ಹೆಸರು ಕೆಡಿಸಲು ಬಿಜೆಪಿಯ ಕೆಲವರು ಕಾದು ನಿಂತಿದ್ದಾರೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಅಭಿಮಾನಿ ಬಳಗ ಹಾಗೂಯಂಗ್ ಇಂಡಿಯಾ ಸಂಸ್ಥಾಪಕ ಗೋವಿಂದಗೌಡ ದೂರಿದರು.

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಶಾಸಕ ಎಚ್‌.ಕೆ.ಪಾಟೀಲ ಅವರ ವಿರುದ್ಧ ಮಾಡಿರುವ ಆರೋಪಕ್ಕೆ ಕಿಡಿಕಾರಿದ ಅವರು, ‘ಅನಿಲ ಮೆಣಸಿಕಾಯಿಗೆ ಎಚ್‌.ಕೆ.ಪಾಟೀಲರ ಹೆಸರು ತೆಗೆದುಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲ ಅಂತ ಕಾಣುತ್ತದೆ. ನಗರಸಭೆ ಚುನಾವಣೆ ಸಂಬಂಧ ಮಿಷನ್‌ 30 ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. 30 ಸ್ಥಾನ ಇರಲಿ; 13 ಸ್ಥಾನ ಗೆಲ್ಲುವುದು ಕೂಡ ಅನುಮಾನವೇ. ಇಂತಹ ಪರಿಸ್ಥಿತಿಯಲ್ಲಿ ಹತಾಶ ಭಾವದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜಿಲ್ಲಾಧಿಕಾರಿಗೆ ಮನವಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರೇ ಅನಿಲ ಅವರ ಜತೆಗೆ ಇರಲಿಲ್ಲ. ತಮ್ಮ ಪಕ್ಷದಲ್ಲೇ ತಾಳ ಮೇಳ ಇಲ್ಲ. ಅವರಲ್ಲೇ ನಾಲ್ಕು ಗುಂಪುಗಳಿವೆ. ಇಂತಹ ‍ಪರಿಸ್ಥಿತಿಯಲ್ಲಿ ಸಣ್ಣತನ ಮಾಡುವುದು, ಬಾಯಿಗೆ ಬಂದಂತೆ ಹೇಳಿಕೆ ಕೊಡುವುದನ್ನು ಬಿಡಬೇಕು. ಲಾಕ್‌ಡೌನ್‌ ಸಂದರ್ಭದಲ್ಲಿ ಶಾಸಕ ಎಚ್‌.ಕೆ.ಪಾಟೀಲ ಅವರು ಸ್ವಂತ ಖರ್ಚಿನಿಂದ ಸಾವಿರಾರು ಮಂದಿಗೆ ದಿನಸಿ ಕಿಟ್‌ ವಿತರಣೆ ಮಾಡಿದ್ದಾರೆ. ಹೀಗಿರುವಾಗ, ಕಾರ್ಮಿಕರ ಕಿಟ್‌ಗಳನ್ನು ಕೆವಿಕೆಯಲ್ಲಿ ಇಟ್ಟುಕೊಂಡು ಅವರೇನು ಮಾಡುತ್ತಾರೆ’‍ ಎಂದು ಹರಿಹಾಯ್ದರು.

ADVERTISEMENT

ವಿನಾಯಕ ಬಳ್ಳಾರಿ, ರಮೇಶ್‌ ಕಟ್ಟಿಮನಿ, ಪ್ರಕಾಶ್‌ ನಿಡಗುಂದಿ, ರಮೇಶ್‌ ಮುಳಗುಂದ, ಭರಮರೆಡ್ಡಿ, ರಾಜು ಅಣ್ಣಿಗೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.