ಗಜೇಂದ್ರಗಡ: ಎಲ್ಲೆಂದರಲ್ಲಿ ನಿಂತಿರುವ ಕೊಳಚೆ ನೀರು, ಶಿಥಿಲವಾಗಿರುವ ಚರಂಡಿಗಳು, ಹೂಳು ತುಂಬಿ ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ದುರ್ವಾಸನೆ, ಸೊಳ್ಳೆ ಕಾಟಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ವಿರುದ್ಧ ಹಿಡಿಶಾಪ ಹಾಕುತ್ತಿರುವ ಗ್ರಾಮಸ್ಥರು...
ಇದು ಚಾಲುಕ್ಯರ ಕಾಲದಲ್ಲಿ ಅಕ್ಕಾದೇವಿಯ ರಾಜಧಾನಿಯಾಗಿದ್ದ, ಹಲವು ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಸೂಡಿ ಗ್ರಾಮದ ದುಃಸ್ಥಿತಿ.
ಗ್ರಾಮದ ಅಂಬೇಡ್ಕರ್ ನಗರದಲ್ಲಿರುವ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಕೆಲ ಚರಂಡಿಗಳ ಹೂಳು ತೆಗೆದು ಚರಂಡಿ ಪಕ್ಕದಲ್ಲಿ ಹಾಕಿ ಹಲವು ದಿನಗಳು ಕಳೆದರೂ ವಿಲೇವಾರಿ ಮಾಡಿಲ್ಲ. ಕಲ್ಲಿನ ಹಾಗೂ ಸಿಸಿ ಚರಂಡಿಗಳು ಶಿಥಿಲಗೊಂಡು ಹಾಳಾಗಿವೆ. ಅಲ್ಲಲ್ಲಿ ಸಿ.ಸಿ ರಸ್ತೆಗಳು ಒಡೆದು ಹಾಳಾಗಿವೆ. ಗ್ರಾಮದ ಬಹುತೇಕ ಓಣಿಗಳಲ್ಲಿ ಇನ್ನೂ ಸಿ.ಸಿ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮದ ರಾಜೀವ್‌ಗಾಂಧಿ ನಗರದಲ್ಲಿ ಮುಖ್ಯ ಚರಂಡಿಗಳಿಲ್ಲದೆ ಕೊಳಚೆ ನೀರು ಅಲ್ಲಲ್ಲಿ ನಿಂತು ಪಾಚಿಗಟ್ಟಿದ್ದು, ಗಬ್ಬೆದ್ದು ನಾರುತ್ತಿದೆ. ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಅಲ್ಲಿಯ ನಿವಾಸಿಗಳ ಬದುಕು ಅಸಹನೀಯವಾಗಿದೆ.
ಗ್ರಾಮದ ಹೊರ ವಲಯದ ರಸ್ತೆ ಪಕ್ಕದಲ್ಲಿನ ಚರಂಡಿಗಳಿಗೆ ತ್ಯಾಜ್ಯ ಸುರಿಯಲಾಗುತ್ತಿದ್ದು, ಚರಂಡಿ ನೀರು ಸರಾಗವಾಗಿ ಹರಿದು ಹೋಗದೇ ಎಲ್ಲೆಂದರಲ್ಲಿ ನಿಂತು ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಮಳೆಗಾಲದಲ್ಲಿ ರಾಜೀವಗಾಂಧಿ ನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ.
ಫ್ಲೋರೈಡ್‌ಯುಕ್ತ ನೀರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಶುದ್ಧೀಕರಿಸಿದ ಮಲಪ್ರಭೆಯ ನದಿ ನೀರು ಪೂರೈಕೆಯಾಗುತ್ತಿದೆ. ಆದರೆ ಸೂಡಿ ಗ್ರಾಮದಲ್ಲಿ ನದಿ ನೀರು ಸಾಕಾಗುವುದಿಲ್ಲ ಎಂದು ನದಿ ನೀರು ಹಾಗೂ ಫ್ಲೋರೈಡ್‌ಯುಕ್ತ ಕೊಳವೆಬಾವಿಯ ನೀರನ್ನು ಸೇರಿಸಿ ಪೂರೈಸಲಾಗುತ್ತಿದೆ. ಇದರಿಂದಾಗಿ ಕೆಲ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ತಂದು ಕುಡಿಯುತ್ತಿದ್ದೇವೆ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಗ್ರಾಮದ ಅಂಬೇಡ್ಕರ್ ನಗರದಲ್ಲಿ ಲಕ್ಷ್ಮೀ ಗುಡಿ ಹಾಗೂ ಅಂಗನವಾಡಿ ನಂ. 153 ಹತ್ತಿರದ ಚರಂಡಿಯನ್ನು ಹಲವು ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರೂ ಸ್ಪಂದಿಸಿಲ್ಲ. ಚರಂಡಿಯ ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ನಾವಿಲ್ಲಿ ನರಕಯಾತನೆ ಅನುಭವಿಸುತ್ತಿದ್ದೇವೆ’ ಎಂದು ಅಂಬೇಡ್ಕರ್ ನಗರದ ನಿವಾಸಿ ಮಹಾಂತೇಶ ಮಾದರ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಪಿಡಿಒ ಅಶೋಕ ಕಂಬಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ತಾಲ್ಲೂಕು ಪಂಚಾಯಿತಿ ಇಒ ಮಂಜುಳಾ ಹಕಾರಿ ಅವರನ್ನು ಕೇಳಿದಾಗ, ‘ಅಲ್ಲೇ ಪಂಚಾಯ್ತಿಯಲ್ಲಿರುತ್ತಾರೆ. ಸಂಜೆ ಮತ್ತೊಮ್ಮೆ ಪ್ರಯತ್ನಿಸಿ ನೋಡಿ’ ಎಂದು ಉತ್ತರಿಸಿದರು. ‘ಕಚೇರಿ ಅವಧಿಯಲ್ಲಿ ಪಿಡಿಒಗಳು ಫೋನ್ ಸ್ವಿಚ್ ಆಫ್ ಮಾಡಬಾರದು ಎಂದು ಮೇಲಧಿಕಾರಿಗಳು ಸೂಚಿಸಿದ್ದರೂ ಕ್ಯಾರೆ ಎನ್ನದ ಅಧಿಕಾರಿಗಳು ಫೋನ್ ಸ್ವಿಚ್ ಆಫ್ ಮಾಡುವುದು, ನಾಟ್ ರೀಚೆಬಲ್ ಮಾಡುವುದು ಸಾಮಾನ್ಯವಾಗಿದೆ’ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ನಿರುಪಯುಕ್ತ ಕಸ ವಿಲೇವಾರಿ ಘಟಕ
ಗ್ರಾಮದಿಂದ ಕುರುಬನಾಳ ಸಂಪರ್ಕಿಸುವ ರಸ್ತೆಯ ಹೊರ ವಲಯದಲ್ಲಿ ₹10.80 ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಆದರೆ ಘಟಕ ನಿರ್ಮಾಣವಾಗಿ ಹಲವು ವರ್ಷಗಳಾದರೂ ಇನ್ನೂ ಬಳಕೆಯಾಗಿಲ್ಲ. ಗ್ರಾಮದ ವಿವಿಧ ಓಣಿಗಳಿಂದ ವಾಹನದಲ್ಲಿ ಸಂಗ್ರಹಿಸುವ ಕಸವನ್ನು ರಸ್ತೆ ಪಕ್ಕದಲ್ಲಿ ಅಥವಾ ಊರ ಹೊರಗೆ ವಿಲೇವಾರಿ ಮಾಡಲಾಗುತ್ತಿದೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಸಿಗದೇ ತೊಂದರೆಯಾದರೆ, ಸೂಡಿಯಲ್ಲಿ ಘಟಕವಿದ್ದರೂ ಬಳಕೆಯಾಗದಿರುವುದು ವಿಪರ್ಯಾಸ.
ಹಂತ ಹಂತವಾಗಿ ಅಭಿವೃದ್ಧಿ
‘ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ವಿವಿಧ ಇಲಾಖೆಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ರಾಜೀವ್ ಗಾಂಧಿ ನಗರದಲ್ಲಿ ಸಿಸಿ ಚರಂಡಿ ನಿರ್ಮಾಣಕ್ಕೆ ಸಿಇಒ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಗ್ರಾಮದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸೂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಖಾದರಬಿ ಮುಜಾವರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.